ಸರ್ವರಿಗೂ ಎಳ್ಳು ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.

 ​✍ ಬಸವರಾಜ ಭೂತಿ, ಶಿಕ್ಷಕರು

​"ಚಾಂಗ್ ಭಲೋ... ಕಿಚಡಿ ಚಾಂಗ್ ಭಲೋ!" ಎಂಬ ಹರ್ಷೋದ್ಗಾರಗಳು ಹೊಲದ ಬದುಗಳಲ್ಲಿ ಪ್ರತಿಧ್ವನಿಸುವ ಕಾಲವಿದು. ಆದರೆ, ಆಧುನಿಕತೆಯ ಅಬ್ಬರದಲ್ಲಿ ಈ ಸುಂದರ ಸಂಸ್ಕೃತಿ ಕೇವಲ ನೆನಪಿನ ಬುತ್ತಿಯಾಗುತ್ತಿದೆಯೇ ಎಂಬ ಆತಂಕ ಮನಸ್ಸನ್ನು ಕಾಡುತ್ತಿದೆ.

​ನಾವು ಸಣ್ಣವರಿದ್ದಾಗ ಎಳ್ಳು ಅಮಾವಾಸ್ಯೆ ಅಂದರೆ ಅದೊಂದು ಹಬ್ಬ ಮಾತ್ರವಾಗಿರಲಿಲ್ಲ; ಅದು ಮಣ್ಣಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಸಂಭ್ರಮವಾಗಿತ್ತು. ಹಬ್ಬಕ್ಕೆ ಎರಡು ದಿನ ಮುಂಚೆಯೇ ಮನೆಯಲ್ಲಿ ತಯಾರಿ ಶುರುವಾಗುತ್ತಿತ್ತು. ಅಮ್ಮ, ಅಕ್ಕಂದಿರು ಸೇರಿ ತಯಾರಿಸುತ್ತಿದ್ದ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿಗಳ ಘಮ ಇಡೀ ಓಣಿಯನ್ನೇ ಆವರಿಸುತ್ತಿತ್ತು. ಕಡ್ಲೆಪಲ್ಲೆಯ ಹಿಂಡಿ, ಬದನೆಕಾಯಿ ಎಣ್ಣೆಗಾಯಿ, ಶೇಂಗಾ ಹೋಳಿಗೆ, ಜೊತೆಗೆ ಆ ಬಿಸಿಬಿಸಿ ಕಡುಬುಗಳ ರುಚಿ... ಆಹಾ! ಆ ಪ್ರೀತಿಯ ಪಾಕದ ಮುಂದೆ ಇಂದಿನ ಪಿಜ್ಜಾ-ಬರ್ಗರ್‌ಗಳು ನಿಸ್ಸಾರ ಎನಿಸುವುದು ಸಹಜ.. 

ನಮ್ಮ ರೈತರ ಬೆನ್ನೆಲುಬಾದ ಎತ್ತುಗಳನ್ನು ಮೀಯಿಸಿ, ಮೈಗೆ ಬಣ್ಣ ಬಳಿದು, ಕೊಂಬಿಗೆ ಗೊಂಡೆ ಕಟ್ಟಿ, ಜೂಲ ಹಾಕಿ ಶೃಂಗರಿಸುತ್ತಿದ್ದ ಆ ಕ್ಷಣಗಳೇ ಅದ್ಭುತ. ಘಲ್ ಘಲ್ ಎಂದು ನಾದ ಮಾಡುವ ಗೆಜ್ಜೆಗಳ ನಾದದೊಂದಿಗೆ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವ ಸಂಭ್ರಮಕ್ಕೆ ಯಾವ ಐಷಾರಾಮಿ ಕಾರೂ ಸಾಟಿಯಿಲ್ಲ. ಅಂದು ಓಣಿಯವರೆಲ್ಲರೂ ಜಾತಿ-ಬೇಧ ಮರೆತು ಒಂದೇ ಬಂಡಿಯಲ್ಲಿ ಬುತ್ತಿ ಹೊತ್ತು ಹೊರಡುತ್ತಿದ್ದ ಆ ಸಾಮೂಹಿಕ ಬಾಂಧವ್ಯವೇ ನಮ್ಮ ದೇಶೀ ಪರಂಪರೆಯ ಶಕ್ತಿ.

​ಆದರೆ ಇಂದು? ಹಳ್ಳಿಯ ಹೊಲಗಳನ್ನು ಮಾರಿ ನಗರಕ್ಕೆ ವಲಸೆ ಹೋದ ನಮಗೆ, ಕಾಂಕ್ರೀಟ್ ಕಾಡಿನ ಉದ್ಯಾನವನದಲ್ಲಿ (ಪಾರ್ಕ್) ಕುಳಿತು ಬುತ್ತಿ ಬಿಚ್ಚುವುದು ಅನಿವಾರ್ಯವಾಗಿದೆ. ಅಲ್ಲಿ 'ಚೆರಗ' ಚೆಲ್ಲಲು ಭೂಮಿತಾಯಿಯಿಲ್ಲ, ಪೂಜಿಸಲು ಬನ್ನಿ ಮರವಿಲ್ಲ. ಪಾಶ್ಚಾತ್ಯ ಉಡುಪಿನ ಮೋಹದಲ್ಲಿ ನಮ್ಮ ಹೆಣ್ಣುಮಕ್ಕಳು ಅಪ್ಪಟ ದೇಶೀ ಉಡುಗೆಯಾದ ಸೀರೆ-ಕುಪ್ಪಸ, ಬೋರಮಳ, ನತ್ತುಗಳಿಂದ ದೂರವಾಗುತ್ತಿರುವುದು ಸಂಸ್ಕೃತಿಯ ಅವನತಿಯ ಸಂಕೇತದಂತಿದೆ.


 

​ಹೊಲದ ನಡುವೆ ಐದು ಕಲ್ಲುಗಳನ್ನಿಟ್ಟು ಕಲ್ಲ ಪಾಂಡವರೆಂದು ಭಾವಿಸಿ, ಪೂಜಿಸಿ, ಹೊಲದ ತುಂಬಾ ಓಡಾಡಿ 'ಚೆರಗ' ಚೆಲ್ಲುತ್ತಿದ್ದ ಆ ಕ್ಷಣಗಳಲ್ಲಿ ನಮಗೆ ಸಿಗುತ್ತಿದ್ದ ತೃಪ್ತಿ ಇಂದು ಮೊಬೈಲ್ ಗೀಳಿನಲ್ಲಿ ಕಳೆದುಹೋಗುತ್ತಿದೆ. ಮರದ ಕೆಳಗೆ ಕುಳಿತು ಎಲ್ಲರೂ ಹಂಚಿಕೊಂಡು ಸವಿಯುತ್ತಿದ್ದ ಆ ಮೃಷ್ಟಾನ್ನ ಭೋಜನದ ಆತ್ಮೀಯತೆ ಯಾವ ಫೈವ್ ಸ್ಟಾರ್ ಹೋಟೆಲ್‌ನಲ್ಲೂ ಸಿಗಲು ಸಾಧ್ಯವಿಲ್ಲ.

​ಊಟದ ನಂತರ ಜೋಕಾಲಿ ಆಡುವುದು, ಹೊಲದಲ್ಲಿ ದಂಟು ಮುರಿದು ತಿನ್ನುವುದು, ಬಾರಿಕಾಯಿ ಹುಡುಕುವುದು... ಇವೆಲ್ಲವೂ ಕೇವಲ ಆಟಗಳಲ್ಲ, ಅವು ನಮ್ಮ ಮಣ್ಣಿನೊಂದಿಗಿನ ನಂಟು. ಇಂದಿನ ಯುವ ಪೀಳಿಗೆ ಈ ಮೊಬೈಲ್ ಲೋಕದಿಂದ ಹೊರಬಂದು, ನಮ್ಮ ತಂದೆ-ತಾಯಂದಿರು ಉಳಿಸಿಕೊಂಡು ಬಂದ ಈ ಅಮೂಲ್ಯವಾದ ಸಂಸ್ಕೃತಿಯನ್ನು ಉಳಿಸಬೇಕಿದೆ.

​ನಮ್ಮ ಮಣ್ಣಿನ ವಾಸನೆ, ನಮ್ಮ ಸಂಪ್ರದಾಯದ ಸೊಗಡು ಮುಂದಿನ ಪೀಳಿಗೆಗೆ ಕೇವಲ ಫೋಟೋಗಳಲ್ಲಿ ಸಿಗಬಾರದು. ಅದು ಅವರ ಜೀವನದ ಭಾಗವಾಗಬೇಕು. ಬನ್ನಿ, ಈ ಎಳ್ಳು ಅಮಾವಾಸ್ಯೆಯ ನೆಪದಲ್ಲಾದರೂ ನಮ್ಮ ಬೇರುಗಳನ್ನು ಮತ್ತೊಮ್ಮೆ ನೆನೆಯೋಣ.

​✍ ಬಸವರಾಜ ಭೂತಿ

ಶಿಕ್ಷಕರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿಹಳ್ಳಿ (ಅಲ್ಮೆಲ್)

​https://youtu.be/KPK8zNjRQrg?si=a_zIK0JvBa1UzhIT

Comments