ನಿಮ್ಮ ನಿವೃತ್ತಿ ಜೀವನ ಶುಭಕರವಾಗಲಿ ಮೇಡಂ
ಅಪರೂಪದ ಅಪರಂಜಿ: ಸೇವೆ ಮತ್ತು ಸೌಜನ್ಯದ ಮೂರ್ತಿ ಶ್ರೀಮತಿ ಸುರಯ್ಯಾ ಬೇಗಂ ಮೇಡಂ "ಶಿಸ್ತಿನಲಿ ಶಿವ, ಪ್ರೀತಿಯಲಿ ತಾಯಿ, ಜ್ಞಾನದಲಿ ಸರಸ್ವತಿ, ಸೇವೆಯಲಿ ಗಂಗೆಯ ಹರಿವು. ಸುರಯ್ಯಾ ಮೇಡಂ ಎಂಬ ಹೆಸರು ಕೇಳಿದಾಗ, ಮನದಲ್ಲಿ ಮೂಡುವುದು ಗೌರವ, ಕೃತಜ್ಞತೆ ಮತ್ತು ಮಮತೆಯ ಪರಿಮಳವು." ಶಿಕ್ಷಣ ಕ್ಷೇತ್ರ ಎನ್ನುವುದು ಕೇವಲ ಅಕ್ಷರ ಕಲಿಸುವ ಕಾಯಕವಲ್ಲ; ಅದು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬಿತ್ತಿ, ಬದುಕನ್ನು ರೂಪಿಸುವ ಪವಿತ್ರ ತಪಸ್ಸು. ಇಂತಹ ತಪಸ್ಸಿನಲ್ಲಿ ತಮ್ಮ ಇಡೀ ಜೀವನವನ್ನು ಸವೆಸಿ, ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಲ್ಪಿಯಾಗಿ, ಸಹೋದ್ಯೋಗಿ ಶಿಕ್ಷಕರಿಗೆ ದಾರಿದೀಪವಾಗಿ ನಿಂತವರು ಆದರ್ಶ ಪ್ರಾಂಶುಪಾಲರಾದ ಶ್ರೀಮತಿ ಸುರಯ್ಯಾ ಬೇಗಂ ಹಾದಿಮನಿ ಮೇಡಂ. ಕೆಲವು ವ್ಯಕ್ತಿಗಳು ತಾವು ಅಲಂಕರಿಸಿದ ಹುದ್ದೆಯಿಂದ ದೊಡ್ಡವರಾಗುತ್ತಾರೆ, ಆದರೆ ಮೇಡಂ ಅವರು ತಮ್ಮ ಹೃದಯದ ವಿಶಾಲತೆಯಿಂದ ಆ ಹುದ್ದೆಗೆ ಹೆಮ್ಮೆಯನ್ನು ತಂದುಕೊಟ್ಟವರು. 2013ನೇ ವರ್ಷ ನನ್ನ ವೃತ್ತಜೀವನದ ಪ್ರಮುಖ ತಿರುವು. ನಾನು ಶಹಾಪುರಕ್ಕೆ ವರ್ಗಾವಣೆಯಾಗಿ ಬಂದಾಗ ಹೊಸ ವಾತಾವರಣದ ಆತಂಕ ನನಗಿತ್ತು. ಅದಕ್ಕಿಂತ ಹೆಚ್ಚಾಗಿ, "ನೀನು ಸುರಯ್ಯಾ ಮೇಡಂ ಅವರ ಶಾಲೆಗೆ ಹೋಗುತ್ತಿದ್ದೀಯ, ಅವರು ತುಂಬಾ ಸ್ಟ್ರಿಕ್ಟ್, ಹುಷಾರು!" ಎಂದು ಹಲವರು ಹೆದರಿಸಿದ್ದರು. ಹಾಗಾಗಿ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಒಂದು ಭಿನ್ನವಾದ, ಕಠಿಣ ಆಡಳಿತಗಾರ್ತಿಯ ಕಲ್ಪನೆ ಇತ್ತು. ...








