ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ
ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ದಿನ ಪ್ರತಿಯೊಬ್ಬ ಶಿಕ್ಷಕರ ಜೀವನದಲ್ಲೂ ವಿದ್ಯಾರ್ಥಿಗಳ ಭೇಟಿ ಕಣ್ಣಂಚಲಿ ತೊಟ್ಟಿಕ್ಕುವ ಆರ್ದ್ರ ಘಳಿಗೆ ಮಕ್ಕಳ ಒಡನಾಟದ ಮಧುರ ಕ್ಷಣಗಳು, ಮತ್ತು ಅವರ ವಿದಾಯ ಭಾವನಾತ್ಮಕ ಅನುಭವಗಳಾಗಿರುತ್ತವೆ. 6ನೇ ತರಗತಿಗೆ ಪ್ರವೇಶ ಪಡೆಯುವ ಮುದ್ದು ಮಕ್ಕಳು ನಮ್ಮ ವಸತಿ ಶಾಲೆಗೆ ಬಂದಾಗ, ಅವರಲ್ಲಿ ತಾಯಿ-ತಂದೆಯ ಮಮತೆಗೂಡಿ ಶಾಲೆಯ ಹೊಸ ವಾತಾವರಣ ಹಲವಾರು ಭಾವನೆಗಳನ್ನು ಮೂಡಿಸುತ್ತದೆ.
ನಮ್ಮದು ವಸತಿ ಶಾಲೆಯಾದ್ದರಿಂದ, ಮಕ್ಕಳು ಕಡ್ಡಾಯವಾಗಿ 5ನೇ ತರಗತಿಗೆ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಬಡ್ತಿಯಾಗಿ ಬಂದಿರುತ್ತಾರೆ. ಮನೆ ಅಂಗಳದಲ್ಲಿ ಬೆಳೆದಿರುವ ಮಕ್ಕಳನ್ನು ಹೊಸ ವಾತಾವರಣಕ್ಕೆ ತಂದುಬಿಟ್ಟಾಗ ಅವರು ಸ್ವಲ್ಪ ಗಲಿಬಿಲಿಗೊಳಗಾಗುವುದು ಸಹಜ. ಕೆಲವರು ಬೇಗನೇ ಹೊಂದಿಕೊಳ್ಳುತ್ತಾರೆ, ಇನ್ನು ಕೆಲವರಿಗೆ ಹೊಸ ಜೀವನಶೈಲಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಅವರು ತಿಂಗಳಾನುಗಟ್ಟಲೆ ಊರ ಕಡೆಗೆ ಜಪ್ಪಿಟ್ಟು ಕುಳಿತುಕೊಳ್ಳುತ್ತಾರೆ. ಆದರೆ, ಶಿಕ್ಷಕರ ಪ್ರೀತಿ, ನಿಲಯಪಾಲಕರ ಕಾಳಜಿ ಮತ್ತು ಪ್ರಾಂಶುಪಾಲರ ಮಾರ್ಗದರ್ಶನ, ಮಕ್ಕಳನ್ನು ಸದುಪಯೋಗದ ದಾರಿಗೆ ತೆಗೆದುಕೊಂಡು ಹೋಗುತ್ತದೆ.
ಹಾಸ್ಟೆಲ್ ಜೀವನದ ಆರಂಭದ ಕಷ್ಟಗಳು ಮಕ್ಕಳಿಗೆ ಮನೆಯಿಂದ ದೂರವಿದ್ದರೂ, ಆ ಸ್ನೇಹ, ಆಟಪಾಟ, ಶಾಲೆಯ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಅವರ ಜೀವನವನ್ನು ರೂಪಿಸತೊಡಗುತ್ತವೆ. ವಿಶೇಷವಾಗಿ, ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹೆಣ್ಣು ಮಕ್ಕಳ ಶಾಲೆಯಾಗಿರುವುದರಿಂದ ಮಕ್ಕಳಲ್ಲಿ ಸಂವೇದನೆಗಳು ಹೆಚ್ಚಾಗಿ ಕಾಣಿಸುತ್ತವೆ.
6ನೇ ತರಗತಿಯ ಮಕ್ಕಳ ತುಂಟಾಟ, ಕುಚೇಷ್ಟೆ, ಜಗಳಗಳು ನಿತ್ಯದ ಘಟನೆಗಳು. ನಾವು ಶಿಕ್ಷಕರು ತರಗತಿಗೆ ಬಂದರೆ ಸಾಕು, “ಆಕಿ ಬೈತಾಳರೀ!”, “ಸರ್ ಪೇರ್ ಚೆಕ್ ಮಾಡ್ರಿ!”, “ನೋಟ್ ಚೆಕ್ ಮಾಡ್ರಿ!” ಎಂಬ ಧ್ವನಿಗಳು ಎದ್ದೇಳುತ್ತವೆ. ಮಕ್ಕಳ ಚಂಚಲತೆ, ಹೊಡೆದಾಟಗಳು, ಜಗಳ ತುಂಟಾಟ ಕುಚೇಷ್ಟೆಗಳು ಅವರಲ್ಲಿ ಹೆಚ್ಚಾಗಿ ಕೆಲವೊಮ್ಮೆ ಗದರಿಸಬೇಕಾದರೂ, ಅವು ಚಿಕ್ಕ ಮಕ್ಕಳಾದ್ದರಿಂದ ಮತ್ತೆ ನಗುತ್ತಾ, ಪ್ರೀತಿಯಿಂದ ತರಗತಿ ಮುಂದುವರಿಸುತ್ತೇವೆ.
ಜಾಗೃತ ಚಿತ್ತದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ರೂಪಿಸುತ್ತಾರೆ. ಹಾಗೆ, ಎಂಟನೇ-ಒಂಬತ್ತನೇ ತರಗತಿಗೆ ಬಂದಾಗ, ಅವರ ಹುಡುಗಾಟ ತಗ್ಗಿ, ಹೆಚ್ಚು ಹೊಣೆಗಾರಿಕೆಯುಳ್ಳ ಪ್ರಪಂಚದತ್ತ ಮೆಲುಕು ಹಾಕುತ್ತಾರೆ. ಮಾತಿನಲ್ಲಿ ನಾಜೂಕು, ಮನಸ್ಸಿನಲ್ಲಿ ಗೌರವ ತೋರುತ್ತಾರೆ.
ಹತ್ತನೇ ತರಗತಿಯ ಮಕ್ಕಳಲ್ಲಿ, ಶಿಕ್ಷಕರ ಕಾಳಜಿ ಗಾಢವಾಗಿರುತ್ತದೆ. ಅವರು ಉತ್ತಮ ಅಂಕ ಗಳಿಸಬೇಕು, ಶಾಲೆಗೆ ಕೀರ್ತಿ ತರುವಂತಹ ಸಾಧನೆ ಮಾಡಬೇಕು ಎಂಬ ಆಶಯದಲ್ಲಿ ಹೆಚ್ಚುವರಿ ಪಾಠಗಳು, ಸ್ಕೋರಿಂಗ್ ಪ್ಯಾಕೇಜುಗಳ ಮೂಲಕ ಅವರ ಆತ್ಮವಿಶ್ವಾಸ ಬೆಳೆಸುತ್ತೇವೆ. ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಕಾಲಿಡುವ ವೇಳೆಗೆ, ಶಾಲೆಯ ಹಳೆಯ ನೆನಪುಗಳು, ಗುರು-ಶಿಷ್ಯರ ಬಂಧಗಳು, ಸ್ನೇಹಿತೆಯರ ಆಟಪಾಟಗಳು ಮರುಕಳಸಿ ಗದ್ಗದಿತರಾಗುತ್ತಾರೆ.
ಈ ವಿದಾಯದ ಹೊಳಪಿನಲ್ಲಿ, ಮಕ್ಕಳು ಕಣ್ಣಂಚಲ್ಲಿ ನೀರಿನೊಂದಿಗೆ ವಿದಾಯ ಹೇಳುತ್ತಾರೆ. ಶಿಕ್ಷಕರಿಗೆ ಅವರು ಕುಟುಂಬದ ಭಾಗ. ಅವರ ಯಶಸ್ಸು ನಮ್ಮ ಸಂತೋಷ, ಅವರ ನೋವು ನಮ್ಮ ನೋವು. ಕೆಲವರು ಗುರುಪೂರ್ಣಿಮೆಯಂದು, ಶಿಕ್ಷಕರ ದಿನದಂದು ಒಂದೊಂದು ಸಂದೇಶ ಕಳುಹಿಸಿ ನಮ್ಮನ್ನು ನೆನಪಿಸುತ್ತಾರೆ, ಅದು ನಮಗೆ ಅತ್ಯಂತ ಸಂತೋಷ ನೀಡುತ್ತದೆ.
ಪ್ರತಿ ವರ್ಷ, ಹಳೆ ವಿದ್ಯಾರ್ಥಿಗಳು ಹೋಗಿ ಹೊಸ ವಿದ್ಯಾರ್ಥಿಗಳು ಸೇರುತ್ತಾರೆ. ಪುಟ್ಟ ಸಾಹಿಯಂತಿದ್ದ ಅವರ ಬೆಳವಣಿಗೆಗೆ ನಾವು ನೀರುಣಿಸುತ್ತೇವೆ. ಹೊಸ ನಿರೀಕ್ಷೆಗಳು, ಹೊಸ ಕನಸುಗಳು, ಹೊಸ ಭರವಸೆಗಳು ಈ ಪುಟ್ಟ ಮಕ್ಕಳಲ್ಲಿ ಕಂಡುಕೊಳ್ಳುತ್ತೇವೆ.
ಈ ಮಕ್ಕಳಲ್ಲಿ ನಾವು ಭವಿಷ್ಯದ ಉತ್ತಮ ಪ್ರಜೆಗಳನ್ನು ಕಾಣುತ್ತೇವೆ. ಹೀಗಾಗಿ, ವಿದಾಯದ ಆರ್ಥವೊಂದಿಗೇ ಹೊಸ ಆಶಯದ ಬೆಳಕಿನಲ್ಲಿ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳುತ್ತೇವೆ.
ಹೋಗಿ ಬನ್ನಿ ಮಕ್ಕಳೇ... ನಿಮ್ಮ ಭವಿಷ್ಯ ಉಜ್ವಲವಾಗಲಿ... ಕಲಿತ ಈ ಶಾಲೆಯನ್ನು ಮರೆಯದಿರಿ!
ಇಂತಿ,
ನಿಮ್ಮ ಶಿಕ್ಷಕ,
ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,
ವಿಭೂತಿಹಳ್ಳಿ, ಅಲಮೇಲ್ ಸಿಂದಗಿ.
---
Comments
Post a Comment