ಸರ್ವರಿಗೂ ಎಳ್ಳು ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.
✍ ಬಸವರಾಜ ಭೂತಿ, ಶಿಕ್ಷಕರು "ಚಾಂಗ್ ಭಲೋ... ಕಿಚಡಿ ಚಾಂಗ್ ಭಲೋ!" ಎಂಬ ಹರ್ಷೋದ್ಗಾರಗಳು ಹೊಲದ ಬದುಗಳಲ್ಲಿ ಪ್ರತಿಧ್ವನಿಸುವ ಕಾಲವಿದು. ಆದರೆ, ಆಧುನಿಕತೆಯ ಅಬ್ಬರದಲ್ಲಿ ಈ ಸುಂದರ ಸಂಸ್ಕೃತಿ ಕೇವಲ ನೆನಪಿನ ಬುತ್ತಿಯಾಗುತ್ತಿದೆಯೇ ಎಂಬ ಆತಂಕ ಮನಸ್ಸನ್ನು ಕಾಡುತ್ತಿದೆ. ನಾವು ಸಣ್ಣವರಿದ್ದಾಗ ಎಳ್ಳು ಅಮಾವಾಸ್ಯೆ ಅಂದರೆ ಅದೊಂದು ಹಬ್ಬ ಮಾತ್ರವಾಗಿರಲಿಲ್ಲ; ಅದು ಮಣ್ಣಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಸಂಭ್ರಮವಾಗಿತ್ತು. ಹಬ್ಬಕ್ಕೆ ಎರಡು ದಿನ ಮುಂಚೆಯೇ ಮನೆಯಲ್ಲಿ ತಯಾರಿ ಶುರುವಾಗುತ್ತಿತ್ತು. ಅಮ್ಮ, ಅಕ್ಕಂದಿರು ಸೇರಿ ತಯಾರಿಸುತ್ತಿದ್ದ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿಗಳ ಘಮ ಇಡೀ ಓಣಿಯನ್ನೇ ಆವರಿಸುತ್ತಿತ್ತು. ಕಡ್ಲೆಪಲ್ಲೆಯ ಹಿಂಡಿ, ಬದನೆಕಾಯಿ ಎಣ್ಣೆಗಾಯಿ, ಶೇಂಗಾ ಹೋಳಿಗೆ, ಜೊತೆಗೆ ಆ ಬಿಸಿಬಿಸಿ ಕಡುಬುಗಳ ರುಚಿ... ಆಹಾ! ಆ ಪ್ರೀತಿಯ ಪಾಕದ ಮುಂದೆ ಇಂದಿನ ಪಿಜ್ಜಾ-ಬರ್ಗರ್ಗಳು ನಿಸ್ಸಾರ ಎನಿಸುವುದು ಸಹಜ.. ನಮ್ಮ ರೈತರ ಬೆನ್ನೆಲುಬಾದ ಎತ್ತುಗಳನ್ನು ಮೀಯಿಸಿ, ಮೈಗೆ ಬಣ್ಣ ಬಳಿದು, ಕೊಂಬಿಗೆ ಗೊಂಡೆ ಕಟ್ಟಿ, ಜೂಲ ಹಾಕಿ ಶೃಂಗರಿಸುತ್ತಿದ್ದ ಆ ಕ್ಷಣಗಳೇ ಅದ್ಭುತ. ಘಲ್ ಘಲ್ ಎಂದು ನಾದ ಮಾಡುವ ಗೆಜ್ಜೆಗಳ ನಾದದೊಂದಿಗೆ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವ ಸಂಭ್ರಮಕ್ಕೆ ಯಾವ ಐಷಾರಾಮಿ ಕಾರೂ ಸಾಟಿಯಿಲ್ಲ. ಅಂದು ಓಣಿಯವರೆಲ್ಲರೂ ಜಾತಿ-ಬೇಧ ಮರೆತು ಒಂದೇ ಬಂಡಿಯಲ್ಲಿ ಬುತ್ತಿ ಹೊತ್ತು ಹೊರಡುತ್ತಿದ...


Comments
Post a Comment