ಇಂದು ನನ್ನ ಜನ್ಮ ದಿನ..

ಇಂದು ನನ್ನ ಜನ್ಮ ದಿನ.. 

ಹರಸಿ ಹಾರೈಸಿದ ಮನಗಳಿಗೆ

ಕೋಟಿ ಕೋಟಿ ನಮನ. 

ಮುಖಪುಟಕ್ಕೆ (ಪೇಸ್ಬುಕ್) ಬರುವುದಕ್ಕಿಂತ ಮುಂಚೆ ಜನ್ಮದಿನಾಚರಣೆ ಆಚರಣೆ ಇರಲಿಲ್ಲ, ಮೊಬೈಲ್ ಬಂದ ಮೇಲೆ ಹುಟ್ಟು ಹಬ್ಬಗಳು ಹೆಚ್ಚಾಗಿದ್ದು. ಅದರಲ್ಲೂ ಮುಖಪುಟದ ಸ್ನೇಹಿತರಿಗೆ ಮೊದಲು ಗೊತ್ತಾಗುವುದು. ಏಕೆಂದರೆ ಒಂದು ದಿನಕ್ಕೆ ಮುಂಚೆ ಎಚ್ಚರಿಕೆ ಸಂದೇಶ ಹಾಕಿರುತ್ತಾರೆ. ನಂತರ ಬರುವ ಸಂದೇಶಗಳೇ ಬ್ಯಾಂಕಿನವರು ಹಾಗು  ನಾವು ಎಲ್ಲೆಲ್ಲಿ ನಂಬರಗಳು ಕೊಟ್ಟಿರುತಿವೋ ಆ ಎಲ್ಲಾ ಕಂಪನಿ ಹಾಗೂ ಸ್ಟೋರ್ಸ್ ಗಳು ನಂತರ ಸ್ನೇಹಿತರು ಬಂಧುಗಳ ಪ್ರೀತಿಯ ಅಭಿಮಾನದ ಹಾರೈಕೆಯ ಸುರಿಮಳೆ.

ಇದು ನಮ್ಮ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಕೃಪಾ ಕಟಾಕ್ಷದಿಂದ ದಾಖಲಾದ ಜನ್ಮದಿನ, ಅದು ಮೊದಲು ಶಾಲಾ ಪ್ರಮಾಣ ಪತ್ರಗಳಲ್ಲಿ ಮಾತ್ರ ಸೀಮಿತವಾಗಿತ್ತು. ನಂತರ ಎಲ್ಲರಿಗೂ ಜನ್ಮದಿನದ ಜ್ಞಾಪನ ಕಳಿಸಿ, ಎಲ್ಲರಿಗೂ ಎಲ್ಲರಿಗೂ ಶುಭಾಶಯಗಳು ಕಳಿಸಲು ಅನುವು ಮಾಡಿಕೊಟ್ಟಿದ್ದೆ ಫೇಸ್ಬುಕ್ ಅಲ್ಲವೆ..

ಅದಕ್ಕೆ ನನ್ನ ಜನ್ಮದಿನದ ರಹಸ್ಯ ಕುರಿತು ಸ್ವಲ್ಪ ಬರೆಯೋಣ ಅಂತ ಪೆನ್ನು ಹಿಡಿದು ನಮ್ಮ ಅವ್ವನ ಹತ್ತಿರ ಹೋಗಿ ಕುಳಿತು ಜನ್ಮ ದಿನದ ರಹಸ್ಯ ಕೆದಕಿದೆ. 

. "ಯವ್ವ ನಾ ಯಾವಾಗ ಹುಟ್ಟಿನಿ ಅಂತ ನಿನಗೆನರ ಗೊತ್ತಾದೇನು?... ಇಲ್ಲಾ  ಎಲ್ಲರಾ ಚಿಟ್ಯಾಗ,,, ಗಿಟ್ಯಾಗ,,, ಬಾರದಿಟ್ಟಿದ್ದು ನೆನಪಾದೇನು?"...ಅಂದೆ" ... 

ಎಂದು ಕೇಳದ ಈ ಪ್ರಶ್ನೆಗೆ ನಮ್ಮವ್ವ ಮುಗುಳ್ನಗ್ತಾ  ಉತ್ತರಿಸಿದಳು

"ಇವಾಗಿನವರಂಗ ನಾವೆಲ್ಲಿ ಸ್ಯಾಣ್ಯಾರು, ಸಾಲಿ ಕಲತಿದ್ದರ ಬರದಿಡುತಿದ್ವಿಯೇನೊ?".. 

ಅಂದವಳೇ ಎಲ್ಲವೂ ಹೇಳೋದಕ್ಕೆ ಪ್ರಾರಂಭಿಸಿದಳು. 

"ಆಗಿನ ಕಾಲದಾಗ ಹೆಣ್ಣು ಮಕ್ಕಳಿಗಿ ಸಾಲಿ ಹಿಂದ ಸಹ ಹಾಯ್ಲಾಕ ಸ್ವಾತಂತ್ರ್ಯ ಇರಲಿಲ್ಲ ಎಲ್ಲಿಂದ ಸಾಲಿ ಕಲಿಯೋದು. ನಮ್ ಅಪ್ಪಗ ನಾವು ಹದಿನಾಲ್ಕು ಮಂದಿ ಮಕ್ಕಳು. ಆಗ ಹೊಟ್ಟಿ ತುಂಬಿಸಿಕೊಳ್ಳೋದೆ ದೊಡ್ಡ ಕಷ್ಟ ಆಗಿತ್ತು. ಹೆಣ್ಣ ಮಕ್ಕಳ ಸಾಲಿ ಕಲಿತಿನಿ ಅಂದ್ರ ಆವಗಿನವರು ಮೂಗ್ ಮುರಿತಿದ್ರು"... ಅಂದ್ಳು.... ಮತ್ತೆ ಕುತೂಹಲದಿಂದ ನಾನು ಏನೇನು ಪ್ರಶ್ನೆ ಹಾಕಿ ಕೇಳತೊಡಗಿದೆ.

"ಇಗಿನ ಹೆಂಗಸರು  ಸಾಲಿ ಕಲಿತ ಬಾಳ ಸ್ಯಾಣ್ಯಾ ಇರತಾರ...  ಮಕ್ಳ ಹುಟ್ಟಾನ ದಿನ, ತಿಥಿ, ನಕ್ಷತ್ರ ಅಂತ ಎಲ್ಲವು ಬರ್ದಿದಿಡತಾರ.  ತಿಂಗಳಿಗಿ, ವರ್ಷಕ್ಕೊಮ್ಮಿ ಬಡ್ಡ್ಯಾ, ಗಿಡ್ಡ್ಯಾ ಅಂತ ಎನೇನೊ ಮಾಡ್ತಾರ...  ನಾವೆಲ್ಲಿಂದ ಬರ್ದಿಡೋದು ಅದು ನಮಗೆ ಗೊತ್ತೇ ಇರಲಿಲ್ಲ ಎಲ್ಲಿ ನೆನ್ಪಿಡೋದು" ಅಂದ್ಳು,.. 

"ನೀವ್ ಬರ್ದಿಟ್ಟಿದ್ದರ ಚೊಲೊ ಇರ್ತಿತ ನೋಡು, ಮಂದಿಯಂಗ ನಾನು  ಹುಟ್ಟಿದಬ್ಬ,  ಜೋರಗೆ ಮಾಡಕೊಳ್ಳಬಹುದಿತ್ತು"  ಎಂದು ತಮಾಸೆ ಮಾಡ್ದೆ... 

"ಕಣ್ಣಿದ್ದು ಕುರ್ಡರಪ್ಪ ನಾವು.   ಆಗ ಇವೆಲ್ಲ ಪರದೇಶಿ ಆಚರಣಿ ನಮಗೆಲ್ಲಿ ಗೊತ್ತದ್ವು..... ಅಮಾಸಿ, ಹುಣ್ಣಿಮಿ ನೋಡಿ ಹುಟ್ಟಿದ ದಿನ ಹೇಳುತ್ತಿದ್ದಿವಿ....  ಬಾಳಂದ್ರ ಹುಟ್ಟಿದ ಅಮಾಸಿ ದಿನ,  ತೆಲಿ ಎರ್ದು ಗುಡಿಗಿ ಕಳಿಸ್ತಿದ್ವಿ," ಅಂದ್ಳು

 " ಮಗ ನಿನಗ ಹಡಿಯುವ ದಿವಸ ಮುಂಚ್ಯಾಳೆ ಚಾಂತಾನ ಭಾವಿ ಹೊತ್ತ ಸಂಜಿಕ ಬ್ಯಾನಿ ತಿಂದು ಹಡದಿನಿ".. ಎಂದಾಗ ಅವಳ ಮಾತು ಕೇಳಿ ಸ್ವಲ್ಪ ದುಃಖ ಆಗಿ ಕಣ್ಣಲ್ಲಿ ನೀರು ಇಣುಕುವಾಗಲೇ ವರಿಸಿಕೊಂಡು. ಮತ್ತ ಮುಂದ ಎಂದು ಶುರು ಮಾಡದೆ.

"ಆವತ್ತೇ ನಮ್ಮ ತವರು ಮನೆಯವರು ಕುಭಸ ಮಾಡಾಕ ಬಂಡಿ ಹುಡ್ಕೋಂಡು ಊರಿಗಿ ಬಂದಿದ್ರು..  ನನಗ ಬ್ಯಾನಿ ಶುರುವಾಗಿದ್ವು... ನಿಮ್ ಮುತ್ಯಾ  ಸರ್ಕಾರಿ ದವಾಖಾನಿಗಿ ಕರ್ಕೊಂಡು ಹೋಗಿ ಅಲ್ಲೆ ಬಾಣೆತನನು ಮಾಡ್ಸುದರು" ಎಂದು ಹೇಳಿತು ಆ ಮುಗ್ಧ ಜೀವ. 

ಮತ್ ಕುಬ್ಸಾ ಹ್ಯಾಂಗ್ ಮಾಡಿದ್ರಿ ಬೇ,. ಎಂದು  ಕುತೂಹಲದಿಂದ ಕೇಳಿದೆ.

 "ಬಂದ ಮಂದಿ ಹಂಗ್ಯಾ ಹೊಗ್ಬಾರದಂತ ನಿಮ್ ಮುತ್ಯಾ ಅವತ್ತ  ನಿಮ್ಮ ಅಪ್ಪನ ಸ್ವಾದರತ್ತಿ ಮಗಳು ಯಮನವ್ವ ಅನ್ನೋ  ತಿಳಿಲಾರ್ದ ಸಣ್ಣ್  ಆಡೊ ಹುಡ್ಗಿಗಿ,  ನಿಮ್ಮಪ್ಪನ ಬಾಜು ಕುಂದ್ರುಸಿ ಕುಬಸಾ ಮಾಡಿದರು". ಎಂದು ಸ್ವಲ್ಪ ನಾಚಿಕೆಯಿಂದ ಮುಗುಳ್ನಗುತ್ತಾ ಹೇಳಿದಳು. 

ಅವ್ಳ ಆ ಮುಗ್ದತೆಗೆ ನನಗೂ ನಗು ಬಂತು. ಹೌದೇನು ಮುಂದೇನಾಯ್ತು. ಎಂದೆ. 

"ಚೊಛ್ಛಲ ಮಗ ನೀಯೊಬ್ಬ, ಮತ್ತ ಏಳರಾಗ ಹುಟ್ಟಿದ ನಿಮ್ ತಮ್ಮನೊಬ್ಬ  ಇಬ್ಬರೇ ನನಗ ಜಾಸ್ತಿ ತ್ರಾಸ್ ಕೊಡದೆ ಹುಟ್ಟದವರು... 

"ಒಟ್ಟ್ ಒಂಬತ್ತ್ ಮಕ್ಳ ಹಡ್ದಿನಿ ನಾ, ನಿಮ್ಮಿಬ್ಬರಿಗಿ ಬಿಟ್ರ ಉಳಿದವರು ಬದುಕಿಲ್ಲ. ಕೆಲವು ಮಕ್ಳು ಹೊಟ್ಯಾಗ ಸತ್ತು ದವಾಖನ್ಯಾಗ ನರ್ಸ್ಗೋಳು ಹೊಟ್ಟಿ ಹಿಚುಕ್ಯಾಡಿ ಅವುಕ ತಗದಾರ. ಅವು ಬದುಕಿದ್ದರ ಹೆಚ್ಚ್ ಕಮ್ಮಿ ನಿಮ್ಮಷ್ಟೇ ಇರ್ತಿದ್ವು . ಇನ್ನುಳಿದವರು ಆರರಾಗ, ಎಂಟ್ರಾಗ ಹುಟ್ಟಿ ವಾರಗಟ್ಟಲೆ ಬದಕಿ ಸತ್ತು ಹೋಗ್ಯಾವ. ಅವು ಸತ್ತು ಜೀವಕ್ ಬಾಳ  ತ್ರಾಸ ಮಾಡಿ ಹೋಗ್ಯವ ಈಗಿನಂಗ ಆವಾಗ ದವಾಖಾನಿ ಮುಂದರ್ಲಿಲ್ಲ.ದವಾಖಾನ್ಯಾಗ ಸಿಕ್ಕಂಗ ಹೊಟ್ಟಿ ಹಿಚಕ್ಯಾಡಿ ತಗಿತಿದ್ರು. ಸತ್ ಹುಟ್ದಂಗ ಅಗತಿತ್ತು ಎಂದಾಗ.. ಕಲ್ಮಶವಿರದ, ಎಂದು ಇಷ್ಟು ಮಾತಾಡದ ಮುಗ್ದ ಅವ್ವಳ ಮನಸ್ಸಿನ ಮಾತು ಕೇಳಿ, ಕಳ್ ಚುರ ಅಂದು, ಕಣ್ಣಲ್ಲಿ ನೀರ ಮತ್ತೆ ಜಿನುಗಿತು.... 

ಕಣ್ ವರಸಿಕೊಂಡು, "ಅ ದೇವರ ನಿನಗ ಬಾಳ ಅನ್ಯಾಯ ಮಾಡ್ಯಾನ ಬೆ" ಏನುತಾ ಕೃತಕ ನಗುವಿನೊಂದಿಗೆ   "ಇರಲಿ ಬಿಡು ಬೆ... ಇಗಿನವರು ಅಗಿದ್ದರ ಸತ್ತೆ ಹೊಗಿರ್ತಿದ್ರು. ಹಿಂದಕಿನ್ ಮಂದಿದು ಗಟ್ಟಿ ಜೀವ್, ಮೊದಲೆ ಜವಾರಿ ತಿಂದ ಮಂದಿ ಅದ್ಕೆ ಬದುಕಿರಿ".. ಅಂತ ಹೇಳಿ ಸಮಾಧಾನಪಡಿಸಿದೆ.

 "ಮಗ ನೀ ಹುಟ್ಟಿದಾಗ, ದೀವಳ್ಗಿ ಅಮಾಸಿ ಇತ್ತು. ಆಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟಿದ್ದ.. ಅವರು ಶಾಣ್ಯರು ಬರ್ದಿಟ್ಟಿರ ಇಟ್ಟಿರಬೇಕು, ಅವರ್ನ ಕೆಳಿದರ ಗೊತ್ತಾಗತಾದ" ಅಂದ್ಳು.... 

ಇರ್ಲಿ ಬಿಡು, ಈಗೇನು ಮಾಡೋದು ಅದನ ಸುಮ್ಮನೆ ಕುತೂಹಲಕ ಕೇಳಿದೆ.  ನಮ್ಮ ಸಾಲಿ ಮಾಸ್ತಾರು ಅವರಿಗೆ ತಿಳಿದ್ದು ಸಾಲ್ಯಾಗ  ಬರ್ದಿಟ್ಟಾರ. ಅವತ್ತೇ ಎಲ್ಲರೂ ನನಗ ಎಲ್ಲರೂ ಹಾರೈಸತಾರ ನೀ ಚಿಂತಿಮಾಡ್ಬೇಡ.... ಎಂದು ನಗುತ್ತಾ ಸುಮ್ಮನಾದೆ.

ಅಮಾವಾಸಿ, ಹುಣ್ಣಿಮಿ ಲೆಕ್ಕ ಹಾಕಿ ದಿನಗಳ ಅಳೆಯೊ ಕಾಲದಾಗ. ಸಾಲಿ ಕಲಿದವರು ಅವರಾದ್ರು ಹೆಂಗ್ ಬರ್ದಿಟ್ಟಾರು. 

ನಮ್ಮದು ಕೂಡು ಕುಟುಂಬ. ಮಕ್ಕಳು ಸೇರಿ ಸುಮಾರು ಇಪ್ಪತ್ತು ಇಪ್ಪತೈದು ಜನ ಸದಸ್ಯರು ನಮ್ಮ ಮನ್ಯಾಗ. ಒಟ್ಟು ಹತ್ತು ಜನ ಮಕ್ಕಳಲ್ಲಿ ನಮ್ಮಪ್ಪನೆ ಮನಿಗಿ ಹಿರ್ಯಾವ. ಹಿಂಗಾಗಿ ಮನಿ ಜವಾಬ್ದಾರಿ  ನಮ್ಮಪ್ಪನ ಹೆಗಲಮ್ಯಾಲಿತ್ತು. 

ಆಗ ಊರಾಗ ಕೆಲಸ ಬ್ಯಾರೆ ಕಮ್ಮಿ ಇರುತ್ತಿದ್ವು. ಹೀಗಾಗಿ ನಮ್ಮವ್ವಗ ಕರ್ಕೋಂಡು ಮಹಾರಾಷ್ಟ್ರಕ್ಕೆ ದುಡ್ಡ್ಲಿಕೆ ಹೋಗುತ್ತಿದ್ದ.  ನಮ್ ಮುತ್ಯಾ.. ನನಗ, ಮನ್ಯಾಗ ಮಕ್ಕಳ ಜೊತಿ ಅಡಕೋತ ಸಾಲಿ ಕಲಕೋತ ಇರಲಿ ಅಂತ ನನ್ನ ಅವರ ಜೊತಿ ಕಳ್ಸತಿರಲಿಲ್ಲ. ನಮ್ಮ ಅಪ್ಪ ಅವ್ವನ ಜೊತೆ ಇರುವುದಕ್ಕಿಂತ ನಮ್ಮ ಮುತ್ಯಾನ ಜೊತೆ ಇರುತಿದ್ದೆ  ನಿಮ್ಮ ಮುತ್ಯಾ ಸತ್ತ ಮೇಲೆ ನಮ್ಮ ಸ್ವಾದರ್ತ್ತಿ ಮನೆಯಲ್ಲಿ ನಾನು ಮತ್ತು ನಮ್ಮ ಚಿಕ್ಕಪರ  ಜೊತೆ ಬೆಳೆಯತೊಡಗಿದೆ.

 ಕೈ ತಿರಗಿಸಿ, ಜೊಗ್ಗಿ ಹಚ್ಚಿದ್ರು ಕಿವಿಗೆ ಬಾರದ ವಯಸ್ಸಿನ್ಯಾಗ ನಮ್ಮ  ಚಿಕ್ಕಪ್ಪ(ಕಾಕಾ)ರ ಜೊತಿ ನನಗೂ ಶಾಲೆಗೆ ಹೆಸರ ಹಚ್ಚದ್ದ ನಮ್ ಮುತ್ಯಾ..  ಹೆಡ್ ಮಾಸ್ಟರ್ ಜನ್ಮ ದಿನಾಂಕ ಕೇಳಿದಾಗ ದೀಪಾವಳಿ ಸುತ್ತಾ ಮುತ್ತಾ ಹುಟ್ಯಾನ್ರೀ.. ಎಂದು ಹೇಳಿರ ಬೇಕು.. ಅದಕ ನನ್ನ ಜನ್ಮ ದಿನಾಂಕ ನವಂಬರ್ ತಿಂಗಳಲ್ಲಿ ಬಂದಿರಬಹುದು. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಹೆಡ್ ಮಾಸ್ಟರ್ಗಳು ಜೂನ್ ತಿಂಗಳಲ್ಲಿ ಹೆಚ್ಚು ಹೆಸರುಗಳು ನಮೂದಿಸಿರುವದೆ ಜಾಸ್ತಿ. 

ನಮ್ ಮುತ್ಯಾ.. ದೀಪಾವಳಿ ಸುತ್ತಾ ಮುತ್ತ ಅಂದಿದ್ದಕ ಇರಬಹುದೇನೊ. ದೀಪಾವಳಿ ಅಮಾವಾಸ್ಯೆ ಬರುವುದು ಸಾಮಾನ್ಯವಾಗಿ ನವಂಬರ್ ತಿಂಗಳಲ್ಲಿ. ಇದ್ನ ಲೆಕ್ಕಾ ಹಾಕಿ ಹೆಡ್ ಮಾಸ್ಟರ್ಗಳು ನವಂಬರ್ 15 ಎಂದು ದಾಖಲು ಮಾಡಿರಬೇಕು ಅನಿಸುತ್ತದೆ.

ಅದೇನೇ ಇರಲಿ, ನನಗೆ ಜನ್ಮ ನೀಡಿದ್ದು ನನ್ನ ತಂದೆ ತಾಯಿಯಾದರೆ. ಹುಟ್ಟಿದಬ್ಬ ಆಚರಿಸಿಕೊಳ್ಳಲು ಒಂದು ಪ್ರಮಾಣ ಪತ್ರದಲ್ಲಿ ಜನ್ಮದಿನವನ್ನು ನೀಡಿದ್ದು ನಮ್ಮ ಹೆಡ್ ಮಾಸ್ಟ್ರುಗಳೇ...

ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ದಾಖಲಾಗಿ. ಅದೇ ನನ್ನ ಜನ್ಮ ದಿನವಾಗಿ ಇಂದಿನವರೆಗೂ ಆಚರಣೆ ನಡೆಯುತ್ತಲೇ ಇದೆ... ನನ್ನ ಪ್ರೀತಿಯ ಮಡದಿಯು ಕೂಡ ಪ್ರತಿ ವರ್ಷ ಇದೇ ದಿನ ನನ್ನ ಹುಟ್ದಬ್ಬಕ್ಕೆಂದು ಹಣ ಕೂಡಿಟ್ಡು, ಹೊಸ ಬಟ್ಟೆಯೊಂದಿಗೆ ಮತ್ತೇನರೆ ಉಡುಗೊರೆಯು ಸಹ ಕೊಡಿಸತ್ತಾಳೆ. ನನ್ನ ಮಕ್ಕಳು ಸಿಹಿ ತಿನಿಸಿ ಶುಭಾಶಯಗಳು ಕೋರಿದಾಗ ಬಾಳು ಸಾರ್ಥಕ ಎನಿಸುತ್ತದೆ. 

ಪ್ರತಿ ವರ್ಷವೂ ಮುಖಪುಟ (ಫೇಸ್ಬುಕ್) ಎಲ್ಲರಿಗೂ ಜ್ಞಾಪಿಸುತಿದ್ದಂತೆ.  ಸ್ನೇಹಿತರು ಬಂಧು ಬಾಂಧವರು ಶುಭಾಶಯಗಳ ಸುರಿ ಮಳೆಗಳೇ ಸುರಿಸಿ, ಫೇಸ್ಬುಕ್ ವಾಟ್ಸಪ್ ತುಂಬಿ ಬಿಡುತ್ತಾರೆ. 

ಎಷ್ಟೋ..! ಜನ ಆತ್ಮೀಯರು, ನನ್ನ ಮುದ್ದು ವಿದ್ಯಾರ್ಥಿನಿಯರು ನನ್ನ ಭಾವಚಿತ್ರವನ್ನು ತಮ್ಮ ವಾಟ್ಸಪ್ ಅಂತಸ್ತಿಗೆ ಇಟ್ಟುಕೊಂಡು ಅಭಿಮಾನತೋರಿ ಅಭಿನಂದಿಸುತ್ತಾರೆ. ಸ್ನೇಹಿತರು ಪಾರ್ಟಿ ಬೇಡಿ ಚುಡಾಯಿಸುತ್ತಾರೆ. ಇದೆಲ್ಲ ನೋಡಿದಾಗ ಖುಷಿಯಿಂದ ಮನದುಂಬಿ ಅಭಿನಂದಿಸಿದವರಿಗೆ ಪುನಃ ಧನ್ಯವಾದಗಳು ಕೂಡ ತಿಳಿಸಲು ಮುಂದಾಗುತ್ತೇನೆ.

ನನ್ನ ಜನ್ಮ ದಿನಕ್ಕೆ ಶುಭಾಶಯ ಕೋರಿದ ಎಲ್ಲಾ ಆತ್ಮೀಯರಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು

◼ ಶ್ರೀ ಬಸವರಾಜ  ಭೂತಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು

Comments