ಕಣ್ಮನಸೆಳೆಯುವ ಕಲ್ಯಾಣಿ ಏವೂರ

 ಸಿಂದಗಿ ಹಾಗೂ ಶಹಾಪುರಕ್ಕೆ ಸುಮಾರು 12 ವರ್ಷದಿಂದ ಅಲೆದಾಡುತಿದ್ದೇನೆ. ಕಾರಣ ನನ್ನ ಶಿಕ್ಷಕ ವೃತ್ತಿ. ಬಸ್ಸಲ್ಲಿ ಕುಳಿತಾಗ ಹೀಗೆ ಹಲವರ ಬಾಯಿಂದ ಕೇಳಿದ್ದೆ,  ಏವೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ದೇವಾಲಯಗಳು, ಶಾಸನಗಳು ಹಾಗೂ ಸುಂದರವಾದ ಕಲ್ಯಾಣಿ ಇದೆ ಎಂದು.ಆದರೆ ಇದುವರೆಗೂ ನೋಡಿರಲಿಲ್ಲ. ನೋಡುವ ಕುತೂಹಲ ಮನದಲ್ಲಿದ್ದರೂ, ಅಷ್ಟೇ ಸುಮಾರಾಗಿ ಇರಬಹುದೆನೊ ಅಂದುಕೊಂಡು ನಿರ್ಲಕ್ಷಿಸಿದ್ದೆ. 

ಮೊನ್ನೆ ಬಕ್ರೀದ್ ಹಬ್ಬದ ನಿಮಿತ್ಯ ಶಾಲೆಗೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೋಟರ್ ಸೈಕಲ್ ಹತ್ತಿ ಊರ ಕಡೆಗೆ ಹೊರಟಿದ್ದೆವು. ಏವೂರ ಸಮಿಪಿಸುತಿದ್ದಂತೆ  ನಮ್ಮಾಕೆಗೆ ಕೇಳಿದೆ; "ಇಲ್ಲೊಂದು ಸುಂದರವಾದ ಪುರಾತನ ಕಲ್ಯಾಣಿ ಇದೆಯಂತೆ ನೋಡೋಣ" ಎಂದು. ಅವಳು ಒಮ್ಮೆಲೆ, ನನ್ನ ಮಾಕ್ಕಳಂದಿಗೆ ಆಯ್ತು ಎಂದು ತಲೆ ಆಡಿಸಿದಳು. ಪೂರಾತನ ದೇವಾಲಯದ ಕಡೆಗೆ ಹೋಗಲು ದಾರಿ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದ ಸಿಸಿ ರಸ್ತೆಯ ಕಡೆಗೆ ನನ್ನ ಗಾಡಿ ಹೊರಳಿಸಿ,  ಪಕ್ಕದಲ್ಲಿ ನಿಂತಿದ್ದ ಊರಿನ ಹಿರಿಯರೊಬ್ಬರಿಗೆ ದೇವಾಲಯಕೆ ಹೋಗಲು ದಾರಿ ಕೇಳಿದೆ. ಆಗವರು "ಇದೇ ಸಿಸಿ ರಸ್ತೆ ಹಿಡಿದು ಸ್ವಲ್ಪ ಮುಂದೆ ಹೋಗಿ ಎಡಗಡೆಗೆ


ಹೊರಳಿರಿ, ಮುಂದೆ ದೇವಸ್ಥಾನ ಕಾಣುತ್ತದ" ಎಂದರು. ಅವರಿಗೆ ಧನ್ಯವಾದ ತಿಳಿಸಿ.  ದೇವಾಲಯದ ಕಡೆಗೆ ಹೊರಟೆ. ಒಂದೆರಡು ತಿರುವು ದಾಟಿ ಹೋಗುವಷ್ಟರಲ್ಲಿ ಹಾಳು ಬಿದ್ದ ದೇವಾಲಯದ ಮಹದ್ವಾರದ ಸುಂದರ ನೋಟ ಎದುರಿಗೆ ಕಾಣಿಸಿತು. ದೇವಾಲಯದ ಎದುರಿಗೆ ಹೋಗಿ ಗಾಡಿ ತರುಬಿ ನಿಲ್ಲಿಸಿದೆ. 

ಕಲ್ಯಾಣಿ

ದೇವಾಲಯದ ಮುಂದೆ ವಿಶಾಲವಾಗಿ ಹರಡಿ ಬೆಳೆದು ನಿಂತಿದ್ದ ಆಲದ ಮರ ಅಲ್ಲಿನ ದೊಡ್ಡ ದೊಡ್ಡ ಕಲ್ಲಕಟ್ಟೆಯನ್ನು ತನ್ನ ನೆರಳಿಂದ ಆವರಿಸಿ ತಂಪಾಗಿಸಿತ್ತು. ಹೀಗಾಗಿ ಬಿಸಿಲಿಗೆ ಬಳಲಿ ಬಂದವರಿಗೆ ಕೂಡಲು ಆ ಜಾಗ ಹಿತವಾಗಿತ್ತು. ಅದಕ್ಕೆ ಎನೋ... ಊರ ಹಿರಿಯ, ಕಿರಿಯರ ದಂಡೇ.. ಅಲ್ಲಿ ಬಿಡಾರ ಹೂಡಿ, ವಿಶ್ರಾಂತಿ ಪಡೆಯುತ್ತಿತ್ತು. 

ಗಾಡಿಯಿಂದ ಇಳಿದು ಆ ಕಡೆ, ಈ ಕಡೆ ನೋಡಿದೆ. ಊರಿನ ಕೇಲವು ಜನ ದೇವಸ್ಥಾನದ ಕಟ್ಟಿಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಬಿಟ್ಟರೆ ಬೇರೆ ಯಾರು  ದೇವಸ್ಥಾನ ನೋಡಲು ಬಂದವರು ಅಲ್ಲಿ ಕಾಣಿಸಲಿಲ್ಲ. ದೇವಸ್ಥಾನದ ಒಳಗೆ ಹೋಗುವುದೋ... ಬೇಡವೋ..ಅಂದುಕೊಳ್ಳುತ್ತಾ. ಸ್ವಲ್ಪ ಹೋತ್ತು ಅಲ್ಲೇ ನಿಂತೆ. 


ಕಟ್ಟಿಯ ಮೇಲೆ ಕುಳಿತಿದ್ದವರಿಗೆ ನಾವು ಹೊಸಬರೆಂಬುದು ಗೊತ್ತಾಗಿ, ದುರಗುಟ್ಟಿ ನಮ್ಮನ್ನೇ ನೋಡುತ್ತಿದ್ದದ್ದರು. "ಇಲ್ಲಿ ಯಾರು ಬರಲ್ಲ ಇವನ್ಯಾರಪ್ಪ ಕುಟುಂಬ ಕರಕೊಂಡು ಬಂದಿರೋನು, ಇಲ್ಲೆನು ಅಂತಾ ಮಹಾ ಇದೆ ಅಂತ" ಅವರು ಮನಸಗಸಲ್ಲಿ ಅಂದರು ಅಂದುಕೊಂಡಿರಬಹುದೆನೋ.. 

ಇಲ್ಲಿಯವರೆಗೆ ಬಂದು ಹಾಗೆ ಹೋಗುವುದು ಬೇಡವೆಂದು ತಿಳಿದು. ಅಲ್ಲಿ ಕುಳಿತಿದ್ದವರ ಕಡೆಗೆ ನೋಡಿಯೂ ನೋಡದಂತೆ. ವಲ್ಲದ ಮನಸ್ಸಿಂದ, ನನ್ನ ಪರಿವಾರ ಜೋತೆ ಸ್ವಲ್ಪ ಆತಂಕದಲ್ಲಿಯೆ ದೇವಾಲಯದೊಳಗಡೆ ಹೆಜ್ಜೆ ಹಾಕಿದೆ. 

ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ದೊಡ್ಡ ದೊಡ್ಡ ಕಲ್ಲಿನ ಕಂಬಗಳು, ಮೇಲ್ಚಾವಣಿಗಳು ಕಂಡವು. ದೇವಾಲಯದ ಒಳಗೂ ಕಲ್ಲಿನ ತಂಪಾದ ಹಾಸಿಗೆಯ ಮೇಲೆ ಮಲಗಿ ಕೆಲವರು ವಿಶ್ರಾಂತಿ ಪಡೆಯುತ್ತಿದ್ದು ಕಂಡು ಬಂತು. ಯಾರಿಗೂ ಮಾತಾಡ್ಸದೆ ಸುಮ್ಮನೆ ಕಲ್ಯಾಣಿ ಕಡೆಗೆ ಹೊರಟೆವು.  

ಬಹಳ ದಿನಗಳಿಂದ ಹೂಳು ತೆಗೆಯದೆ ಸುಂದರವಾದ ಕಲ್ಯಾಣಿ ಕಪ್ಪೆ ಹಾಸ್ಕಟ್ಟಿ, ಸ್ವಚ್ಛತೆಗಾಗಿ ಹಾತೋರೆದು ಕುಳಿತಂತೆ ಕಾಣುತ್ತಿತ್ತು. ಎದುರಿಗೆ ಒಂದಿಷ್ಟು ಜನ ಹುಡುಗರು ನೀರೊಳಗೆ ಕಲ್ಲು ಎಸೆಯುತ್ತ ಆಟವಾಡುತ್ತಿದ್ದರು. 


ಆ ವಿಶಾಲ ಕಲ್ಯಾಣಿ ನೋಡಲು ಬಲು ಸುಂದರವಾಗಿತ್ತು. ಆ ಕಲ್ಯಾಣಿಯ ಕಲ್ಲಿನ ಗೋಡೆಯ ಸುತ್ತಲು ಕೆತ್ತಿದ ಅನೇಕ ಕಲಾಕೃತಿಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಯಾಗಿದ್ದವು. ನೋಡಲು ಕಣ್ಮನ ಸೆಳೆಯುತಿದ್ದ ಕಲ್ಯಾಣಿಯಲ್ಲಿ ತುಸು ಹೊತ್ತು ನಿಂತು. ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಹಬ್ಬವಾದೆವು.


ಇಷ್ಟೊಂದು ಸುಂದರವಾದ ದೇವಾಲಯ ಹಾಗೂ ಕಲ್ಯಾಣಿಯ ಕುರಿತು ತಿಳಿಯಲು ಉಸ್ತುಕನಾಗಿ ಗೂಗಲ್ ಸರ್ಚ್ ಮಾಡಲು ಮುಂದಾದೆ.  ಗೂಗಲ್ ನನಗೆ ಅಲ್ಪಸ್ವಲ್ಪ ಮಾಹಿತಿ ಒದಗಿಸಿ ಕೊಟ್ಟಿತು. 


11 ರಿಂದ 12 ನೇ ಶತಮಾನದಲ್ಲಿ ಈ ಭಾಗವನ್ನು ಆಳಿದ ಕಲ್ಯಾಣಿ ಚಾಲುಕ್ಯರ 2 ಮತ್ತು ಕಳಚೂರಿ ಅರಸರ 2 ಶಾಸನಗಳು ಅಲ್ಲದೇ ಇನ್ನು ಅನೇಕ ಶಾಸನಗಳು ಇಲ್ಲಿ ಲಭಿಸಿವೆಯಂತೆ. ಅಲ್ಲಲ್ಲಿ ಸ್ವಲ್ಪ ಬಿಟ್ಟು  ಎಲ್ಲಾ ಸುಸ್ಥಿತಿಯಲ್ಲಿರುವುದು ವಿಶೇಷ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕøತಿಕ ಸಮೃದ್ಧ ಕೇಂದ್ರವಾಗಿತ್ತೆಂದು ಗೂಗಲ್ ಮೂಲಕ ತಿಳಿದುಕೊಂಡೆ. ಇಂದಿಗೂ ಕಣ್ಮನಸೆಳೆಯುವ ಚಿತ್ತಾಕರ್ಷಕ ಶಿಲ್ಪಕಲೆ, ಸ್ಥಂಭಾಕಾರದ ಶಾಸನಗಳು, ಬಹುಕೋನಗಳಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪಗಳುಳ್ಳ, ಮಂದಿರಗಳು, ಬಸದಿಗಳು, ಮೂರ್ತಿಗಳು ಒಳಗೊಂಡ ಸೋಮೇಶ್ವರ- ಸಂಗಮೇಶ್ವರ ದೇವಸ್ಥಾನಗಳು, ಶಿವ ಪಾರ್ವತಿಯರ,ವಿಷ್ಣು, ಗರುಡ, ಸರ್ಪ ಸೇರಿದಂತೆ ವೈವಿಧ್ಯಮಯ ದೇವತೆಗಳಮೂರ್ತಿಗಳು, ನೋಡಿದಷ್ಟು ನೋಡುತ್ತಲೇ ಇರಬೇಕೆಂಬ ಮನದಣಿಯದ, ಕಣ್ಮನ ಸೆಳೆಯುವ ಅಪೂರ್ವ ಶಿಲ್ಪಕಲೆಗಳು ಗ್ರಾಮದಲ್ಲಿ ಇವೆ. 

ಅಲ್ಲಿ ಇಲ್ಲಿ ಮುರಿದುಬಿದ್ದ ಕಂಬಗಳು, ನೆಲದಲ್ಲಿ ಹೂತುಹೋದ ಮೂರ್ತಿಗಳು ಕಂಡು ಇಂತಹ ಪುರಾತನವಾದ ದೇವಾಲಯದ ಮೇಲೆ ಇನ್ನು ಯಾಕೆ ಪ್ರವಾಸ ಉದ್ಯಮ ಇಲಾಖೆಯ ಕಣ್ಣು ಬಿದ್ದಿಲ್ಲ ಅನಿಸಿತು. ಬಿದ್ದರೂ ಇದರ ರಕ್ಷಣೆಗೆ ಇನ್ನೂ ಯಾಕೆ ಧಾವಿಸಿಲ್ಲ ಅನ್ನು ಅನುಮಾನ ಕಾಡಿತು. ಈ ಸ್ಥಳವನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿ ಸ್ಥಾನವಾಗಿ ಮಾಡಿದರೆ ಇಲ್ಲಿನ ನೂರಾರು ಜನರಿಗೆ ಉದ್ಯೋಗವು ಸಿಗುವುದರ ಜೊತೆಗೆ ನಮ್ಮ ಪೌರಾಣಿಕ ಕಲಿಯನ್ನು ಉಳಿಸಿಕೊಳ್ಳಬಹುದು ಎಂದು ಮನಸಲ್ಲಿ ಅಂದುಕೊಂಡೆ. ಈ ಸ್ಥಳಕ್ಕೆ ಸರಕಾರದ ರಕ್ಷಣೆಯ ಅವಶ್ಯಕತೆ ಇದೆ. ಇಲ್ಲದೆ ಹೋದರೆ ಅನೈತಿಕ ಚಟುವಟಿಕೆಗಳ ತಾಣವಾಗಬಹುದೆಂದು ತಿಳಿದು ಮಾನಸ್ಸಿಗೆ ಗಾಸಿಯಾಗಿ ಬೈಕು ಹತ್ತಿ, ಊರ ಕಡೆಗೆ ಹೊರಟಿವು.


************************

ಬಸವರಾಜ ಭೂತಿ.  ಶಿಕ್ಷಕರು, ಸಿಂದಗಿ

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಶಹಪುರ. ಜಿ. ಯಾದಗಿರಿ

Comments