ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ವೈಭವವಾಗಿ ನೆರವೇರಿತು.


ವಿಭೂತಿಹಳ್ಳಿ (ಆಲಮೇಲ), ಫೆ. 18, 2026:
 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿಹಳ್ಳಿ (ತಾ. ಆಲಮೇಲ) ಇಲ್ಲಿ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭವು ಬುಧವಾರ ಮಧ್ಯಾಹ್ನ 3.00 ಗಂಟೆಗೆ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಷ. ಬ್ರ. ಆನಂದಲಿಂಗ ಶಿವಾಚಾರ್ಯರು, ಶ್ರೀ ಮಲ್ಲಿಕಾರ್ಜುನ ಗವಿಮಠ, ಮಾರ್ಸನಹಳ್ಳಿ ವಹಿಸಿದ್ದರು. ಉದ್ಘಾಟಕರಾಗಿ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಸಿ. ಎಂ. ಬಂಡಗಾರ ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀ ರವೀಂದ್ರ ಬಂತನಾಳ ಉಪಸ್ಥಿತರಿದ್ದರು. ಕಾರ್ಯಕ್ರಮವು 9ನೇ ತರಗತಿ ವಿದ್ಯಾರ್ಥಿನಿಯರಿಂದ  ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು. 


ಬಳಿಕ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ಮನಮೋಹಕವಾಗಿ ಮೂಡಿಬಂದಿತು. ಕಾರ್ಯಕ್ರಮವನ್ನು ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ಬಸವರಾಜ ಭೂತಿ ಅವರು ಸೊಗಸಾಗಿ ನಿರೂಪಿಸಿದರು. ಕನ್ನಡ ಶಿಕ್ಷಕರಾದ ಶ್ರೀ ಧರೆಪ್ಪ ಬಿರಾದಾರ ಸ್ವಾಗತ ಭಾಷಣ ಮಾಡಿದರು.  ಶಾಲೆಯ ವಾರ್ಷಿಕ ವರದಿಯನ್ನು ಶಿಕ್ಷಕಿ ಶ್ರೀಮತಿ ರೂಪಾದೇವಿ ವಾಚಿಸಿ, ಶಾಲೆಯ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಧನೆಗಳ ಸಮಗ್ರ ವಿವರ ನೀಡಿದರು. 

ಉದ್ಘಾಟನಾ ಭಾಷಣದಲ್ಲಿ ಶ್ರೀ ಸಿ.ಎಂ. ಬಂಡಗಾರ ಅವರು ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸವೇ ಯಶಸ್ಸಿನ ಮೂಲಮಂತ್ರಗಳೆಂದು ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಿದರು. ಮುಖ್ಯ ಅತಿಥಿ ಶ್ರೀ ರವೀಂದ್ರ ಬಂತನಾಳ ಅವರು ವಿದ್ಯೆಯ ಜೊತೆಗೆ ವಿನಯವೂ ಅಗತ್ಯವೆಂದು ತಿಳಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಳ್ಮೆ ಮತ್ತು ನಿರಂತರ ಅಭ್ಯಾಸದ ಮಹತ್ವವನ್ನು ವಿವರಿಸಿದರು. 

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಪ್ರಭಾಕರ ಪಾಟೀಲ ಅವರು ಶಾಲೆಯ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರ ಶ್ರಮವನ್ನು ಕೊಂಡಾಡಿದರು. ವರ್ಷಪೂರ್ತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಹಾಗೂ ಪದಕಗಳನ್ನು ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಈಶ್ವರ ಬಿರಾದಾರ ಅವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಚಾಲಿಸಿದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಕು. ಪದ್ಮಾವತಿ ತಳಕೇರಿ ವೇದಿಕೆಯಲ್ಲಿ ಆಸೀನರಾಗಿದ್ದು, ಕು. ಸರಸ್ವತಿ ಗುಡ್ಡಳ್ಳಿ ಎಲ್ಲ ವಿದ್ಯಾರ್ಥಿನಿಯರ ಪರವಾಗಿ ಭಾವುಕ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಮತಿ ಮಾಲತಿ ತಡ್ಲಗಿ ವಂದನಾರ್ಪಣೆ ಸಲ್ಲಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಎಂ.ಎ. ಪೀರ್ಜಾದೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಅದ್ಭುತವಾಗಿ ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.

 ಪಾಲಕರ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಬಟಗಿ, ಸಿ ಕೆ ಗುಡ್ಡಳ್ಳಿ ಉಪಸ್ಥಿತರಿದ್ದರು.
ಶಾಲೆಯ ಗಣಿತ ಶಿಕ್ಷಕಿ ಎಸ್ ಎಂ ಶೇಖ, ನರ್ಸಿಂಗ್ ಆಫೀಸರ್ ಸುನಿತಾ ಗೇರಡೇ, ಚಿತ್ರಕಲಾ ಶಿಕ್ಷಕಿ ಜ್ಯೋತಿ,  ಗಣಕಯಂತ್ರ ಶಿಕ್ಷಕ ಶ್ರೀನಾಥ್ ನಾಯ್ಕೋಡಿ ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಸಹಕಾರದಿಂದ ಸಮಾರಂಭವು ಯಶಸ್ವಿಯಾಗಿ ನೆರವೇರಿತು.















Comments