ರಾಜ್ಯದ್ಯಂತ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಶುಭವಾಗಲಿ

Facebookinstagram

ಶಾಲಾ ಜೀವನದ ಒಂದು ಭಾವಯಾನ

         ಇಂದು ನಮ್ಮ ಶಾಲೆಯ ಅಂಗಳದಲ್ಲಿ ಒಂದು ವಿಶಿಷ್ಟ ಮೌನ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ. ಐದು ವರ್ಷಗಳ ಹಿಂದೆ, ಅಮ್ಮನ ಸೆರಗು ಹಿಡಿದು, ಕಣ್ಣೀರು ಹಾಕುತ್ತಾ ನಮ್ಮ ಶಾಲೆಗೆ ಬಂದ ಪುಟ್ಟ ಮಕ್ಕಳು ಇಂದು ಆತ್ಮವಿಶ್ವಾಸದ ಮೂರ್ತಿಗಳಾಗಿ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ​

​"ಬರಿಗೈಲಿ ಬಂದು ಇಂದು ಸಾಧನೆಯ ಶಿಖರ ಏರಲು ಸನ್ನದ್ಧವಾಗಿವೆ. ಜ್ಞಾನದ ಸುಂದರ ಮೂರ್ತಿಗಳಾಗಿ ಕಂಗೊಳಿಸುತ್ತಿವೆ. ಇದೆ ಶಿಕ್ಷಕನ ಬದುಕಿನ ಧನ್ಯತಾ ಭಾವ."

​ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೇವಲ ಕಟ್ಟಡವಲ್ಲ; ಇದು ಸಾವಿರಾರು ಹೆಣ್ಣುಮಕ್ಕಳ ಕನಸುಗಳ ತಾಣ. 6ನೇ ತರಗತಿಗೆ ಬಂದಾಗ ಮನೆ ನೆನಪಿನಲ್ಲಿ ಜಪ್ಪಿಟ್ಟು ಕುಳಿತ ಆ ಮುಗ್ಧ ಮುಖಗಳು ಈಗಲೂ ಕಣ್ಣ ಮುಂದೆ ಇವೆ. ಅಂದು ನಾವು ಅವರಿಗೆ ಕೇವಲ ಪಾಠ ಹೇಳಿಕೊಡದೆ, ಅಮ್ಮನ ಪ್ರೀತಿ, ಅಪ್ಪನ ಧೈರ್ಯ ಮತ್ತು ಅಕ್ಕರೆ ನೀಡಿ. ಆ ಪುಟ್ಟ ಹಕ್ಕಿಗಳಿಗೆ ಇಂದು ಜ್ಞಾನದ ರೆಕ್ಕೆ ಮೂಡಿಸಿ, ಬಾನ ಎತ್ತರಕ್ಕೆ ಹಾರಲು ಸಜ್ಜುಗೊಳಿಸಿದೇವು.

"​KREIS" ಸಂಸ್ಥೆಯ "ಪ್ರತಿಭೆಗೆ ಪುರಸ್ಕಾರ" ಎಂಬ ದ್ಯೇಯ ವ್ಯಾಕ್ಯದಂತೆ, ವಿಭೂತಿಹಳ್ಳಿಯ ಈ ಮಣ್ಣಿನಲ್ಲಿ ನಾವು ನಿಮ್ಮ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ. ಶಿಕ್ಷಕ ವೃಂದ ರಾತ್ರಿ-ಹಗಲೆನ್ನದೆ ನಿಮ್ಮ ಏಳಿಗೆಗಾಗಿ ಶ್ರಮಿಸಿತು. ನಾವು ಮಾಡಿದ ಪಾಠ ಮತ್ತು ವಿಶೇಷ ತರಗತಿಗಳು ಇಂದು ನಿಮ್ಮ ಪರೀಕ್ಷೆಯ ದಾರಿಯನ್ನು ಸುಗಮಗೊಳಿಸಲಿವೆ ಎಂಬ ಅಚಲ ನಂಬಿಕೆ ನಮಗಿದೆ.

​​ಇನ್ನು ಕೆಲವೇ ದಿನಗಳಲ್ಲಿ ನೀವು ನಮ್ಮನ್ನು ಅಗಲಿ ಹೋಗುತ್ತೀರಿ ಎನ್ನುವ ಆತಂಕವು ಇದೆ. ಪ್ರತಿ ಶಿಕ್ಷಕನ ಬದುಕಿನಲ್ಲೂ ಈ ದಿನ ಅತೀವ ಸಂವೇದನೆಯ ಕ್ಷಣ. ವಿದಾಯದ ಈ ಹೊತ್ತಿನಲ್ಲಿ, "ಹೋಗಿ ಬನ್ನಿ ಮಕ್ಕಳೇ" ಎಂದು ಹೇಳುವಾಗ ನಮ್ಮ ಗಂಟಲು ಕೂಡ ಗದ್ಗದಿತವಾಗುತ್ತದೆ. ನೀವು ನಮ್ಮ ಶಾಲೆಯಿಂದ ದೂರವಾಗುತ್ತಿದ್ದೀರಿ ಅಷ್ಟೇ, ನಮ್ಮ ಹೃದಯದಿಂದಲ್ಲ. ನಿಮ್ಮ ಯಶಸ್ಸಿನ ಸುದ್ದಿಯೇ ನಮಗೆ ನೀವು ನೀಡುವ ಅತಿದೊಡ್ಡ 'ಗುರುದಕ್ಷಿಣೆ'. .


​ಮಕ್ಕಳೇ,, ಭವಿಷ್ಯದಲ್ಲಿ  ನೀವು ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ನಿಮ್ಮಲ್ಲಿರುವ ಈ ಮುಗ್ಧತೆ ಮತ್ತು ಕಲಿಸಿದ ಶಾಲೆಯ ಸಂಸ್ಕಾರವನ್ನು ಸದಾ ಉಳಿಸಿಕೊಳ್ಳಿ.  ಶೇ. 100ರಷ್ಟು ಫಲಿತಾಂಶ ನೀಡಿ ನೀವು ಕಲಿತ ಶಾಲೆಯ ಕೀರ್ತಿ ಪತಾಕೆಯನ್ನು ರಾಜ್ಯಾದ್ಯಂತ ಹಾರಿಸಿರಿ. ನಿಮ್ಮ ಭವಿಷ್ಯವು ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ. ​

ಶುಭವಾಗಲಿ ಮಕ್ಕಳೇ...


ನಿಮ್ಮ ಪ್ರೀತಿಯ ಶಿಕ್ಷಕ,

ಬಸವರಾಜ ಭೂತಿ (ಹಿಂದಿ ಭಾಷಾ ಶಿಕ್ಷಕರು)

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿಹಳ್ಳಿ (ಆಲಮೇಲ್).

Comments