ನಿಮ್ಮ ನಿವೃತ್ತಿ ಜೀವನ ಶುಭಕರವಾಗಲಿ ಮೇಡಂ
ಅಪರೂಪದ ಅಪರಂಜಿ: ಸೇವೆ ಮತ್ತು ಸೌಜನ್ಯದ ಮೂರ್ತಿ ಶ್ರೀಮತಿ ಸುರಯ್ಯಾ ಬೇಗಂ ಮೇಡಂ
![]() |
"ಶಿಸ್ತಿನಲಿ ಶಿವ, ಪ್ರೀತಿಯಲಿ ತಾಯಿ, ಜ್ಞಾನದಲಿ ಸರಸ್ವತಿ, ಸೇವೆಯಲಿ ಗಂಗೆಯ ಹರಿವು. ಸುರಯ್ಯಾ ಮೇಡಂ ಎಂಬ ಹೆಸರು ಕೇಳಿದಾಗ, ಮನದಲ್ಲಿ ಮೂಡುವುದು ಗೌರವ, ಕೃತಜ್ಞತೆ ಮತ್ತು ಮಮತೆಯ ಪರಿಮಳವು."
ಶಿಕ್ಷಣ ಕ್ಷೇತ್ರ ಎನ್ನುವುದು ಕೇವಲ ಅಕ್ಷರ ಕಲಿಸುವ ಕಾಯಕವಲ್ಲ; ಅದು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬಿತ್ತಿ, ಬದುಕನ್ನು ರೂಪಿಸುವ ಪವಿತ್ರ ತಪಸ್ಸು. ಇಂತಹ ತಪಸ್ಸಿನಲ್ಲಿ ತಮ್ಮ ಇಡೀ ಜೀವನವನ್ನು ಸವೆಸಿ, ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಲ್ಪಿಯಾಗಿ, ಸಹೋದ್ಯೋಗಿ ಶಿಕ್ಷಕರಿಗೆ ದಾರಿದೀಪವಾಗಿ ನಿಂತವರು ಆದರ್ಶ ಪ್ರಾಂಶುಪಾಲರಾದ ಶ್ರೀಮತಿ ಸುರಯ್ಯಾ ಬೇಗಂ ಹಾದಿಮನಿ ಮೇಡಂ. ಕೆಲವು ವ್ಯಕ್ತಿಗಳು ತಾವು ಅಲಂಕರಿಸಿದ ಹುದ್ದೆಯಿಂದ ದೊಡ್ಡವರಾಗುತ್ತಾರೆ, ಆದರೆ ಮೇಡಂ ಅವರು ತಮ್ಮ ಹೃದಯದ ವಿಶಾಲತೆಯಿಂದ ಆ ಹುದ್ದೆಗೆ ಹೆಮ್ಮೆಯನ್ನು ತಂದುಕೊಟ್ಟವರು.
2013ನೇ ವರ್ಷ ನನ್ನ ವೃತ್ತಜೀವನದ ಪ್ರಮುಖ ತಿರುವು. ನಾನು ಶಹಾಪುರಕ್ಕೆ ವರ್ಗಾವಣೆಯಾಗಿ ಬಂದಾಗ ಹೊಸ ವಾತಾವರಣದ ಆತಂಕ ನನಗಿತ್ತು. ಅದಕ್ಕಿಂತ ಹೆಚ್ಚಾಗಿ, "ನೀನು ಸುರಯ್ಯಾ ಮೇಡಂ ಅವರ ಶಾಲೆಗೆ ಹೋಗುತ್ತಿದ್ದೀಯ, ಅವರು ತುಂಬಾ ಸ್ಟ್ರಿಕ್ಟ್, ಹುಷಾರು!" ಎಂದು ಹಲವರು ಹೆದರಿಸಿದ್ದರು. ಹಾಗಾಗಿ ನನ್ನ ಮನಸ್ಸಿನಲ್ಲಿ ಅವರ ಬಗ್ಗೆ ಒಂದು ಭಿನ್ನವಾದ, ಕಠಿಣ ಆಡಳಿತಗಾರ್ತಿಯ ಕಲ್ಪನೆ ಇತ್ತು.
ಆದರೆ, ಮೊದಲ ದಿನ ಶಾಲೆಗೆ ಬಂದು ಅವರ ಮುಂದೆ ನಿಂತಾಗ ಆ ಎಲ್ಲ ಕಲ್ಪನೆಗಳು ಸುಳ್ಳಾದವು. ನಾನು ಕೇಳಿದ್ದ ಸುರಯ್ಯಾ ಮೇಡಂ ಬೇರೆ, ನಾನು ಮುಖಾಮುಖಿಯಾಗಿ ಕಂಡ ಮೇಡಂ ಅವರೇ ಬೇರೆ! ಅವರಲ್ಲಿದ್ದ ಶಿಸ್ತು ಕೇವಲ ಹೊರಗಿನ ಆಡಳಿತಕ್ಕಾಗಿ ಇತ್ತೇ ಹೊರತು, ಮನದೊಳಗೆ ಮಮತೆಯ ಮಹಾಸಾಗರವೇ ಇತ್ತು. ಪ್ರಾಂಶುಪಾಲೆಯೆಂಬ ಅಧಿಕಾರದ ಲೇಶವೂ ಇಲ್ಲದೆ, ನನ್ನನ್ನು ಕೇವಲ ಒಬ್ಬ ಸಹೋದ್ಯೋಗಿ ಶಿಕ್ಷಕನಂತೆ ನೋಡದೆ, "ತಮ್ಮ... ಭೂತಿ..." ಎಂದು ಕರೆದ ಆ ಮೊದಲ ಸಂಬೋಧನೆಯಲ್ಲೇ ನನ್ನೊಳಗಿನ ಎಲ್ಲ ಭಯಗಳು ಕರಗಿ ಹೋಗಿದ್ದವು.
ಅವರ ನೇತೃತ್ವದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುವ ಮಹದ್ಭಾಗ್ಯ ನನಗೆ ಲಭಿಸಿತು. ಆ ಸುದೀರ್ಘ ಅವಧಿ ಹೇಗೆ ಕಳೆದುಹೋಯಿತೋ ತಿಳಿಯದು. ಇಷ್ಟು ವರ್ಷಗಳ ಸೇವೆಯಲ್ಲಿ ಅವರು ಒಂದು ದಿನವೂ ನನ್ನ ಮನಸ್ಸಿಗೆ ನೋವಾಗುವಂತೆ ಪ್ರವರ್ತಿಸಲಿಲ್ಲ. ತಪ್ಪುಗಳಾದಾಗ ಮಾರ್ಗದರ್ಶಕಿಯಾಗಿ ಗದರಿಸುತ್ತಿದ್ದರು, ಆದರೆ ಆ ಗದರಿಕೆಯ ಬೆನ್ನಲ್ಲೇ ತಾಯಿಯ ಸಮಾಧಾನ ಇರುತ್ತಿತ್ತು. "ಬಾ ತಮ್ಮ... ಇಲ್ಲಿ ಕುಳಿತುಕೋ..." ಎಂದು ಕರೆದು ತಪ್ಪುಗಳನ್ನು ತಿದ್ದಿ ಮುನ್ನಡೆಸುತ್ತಿದ್ದ ಅವರ ಆ ವಾತ್ಸಲ್ಯದ ಕರೆಯೇ ನನ್ನನ್ನು ವೃತ್ತಿಪರವಾಗಿ ಬೆಳೆಯುವಂತೆ ಮಾಡಿತು.
ನಾನು ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು ಚಿಕ್ಕ ಪುಟ್ಟ ಕವನಗಳನ್ನು ಬರೆಯಲು ತೊಡಗಿದ ಆರಂಭದ ದಿನಗಳವವು. ಬರೆದ ಸಾಲುಗಳನ್ನು ಸಂಕೋಚದಿಂದಲೇ ಅವರಿಗೆ ತೋರಿಸುತ್ತಿದ್ದೆ. ಅವರು ಕೇವಲ ಮೇಲ್ನೋಟಕ್ಕೆ "ಚೆನ್ನಾಗಿದೆ" ಎಂದು ಹೇಳಿ ಪ್ರೋತ್ಸಾಹಿಸುವವರಲ್ಲ; ಬದಲಿಗೆ ಪ್ರತಿಯೊಂದು ಸಾಲನ್ನೂ ಆಳವಾಗಿ ಓದಿ, ಎಲ್ಲಿ ಪದಗಳ ತಿದ್ದುಪಡಿ ಬೇಕು, ಭಾವವನ್ನು ಹೇಗೆ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬೇಕು ಎಂದು ಅತ್ಯಂತ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. ಇಂದು ಸಾಹಿತ್ಯ ಲೋಕದಲ್ಲಿ ನಾನು ಒಂದಿಷ್ಟಾದರೂ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದರೆ, ಅದಕ್ಕೆ ಮೇಡಂ ಅವರ ಬೆನ್ನುತಟ್ಟಿದ ಆ ಪ್ರೋತ್ಸಾಹದ ಹಸ್ತವೇ ಕಾರಣ.
ಒಬ್ಬ ಸಮರ್ಥ ನಾಯಕಿಯಾಗಿ ಅವರ ಆಡಳಿತ ವೈಖರಿ ನಮಗೆಲ್ಲರಿಗೂ ಒಂದು ಪಾಠಶಾಲೆಯಾಗಿತ್ತು. ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪಾಲಕರನ್ನು ಸಮನ್ವಯಗೊಳಿಸುವುದು ಸುಲಭದ ಮಾತಲ್ಲ. ಶಾಲೆಯಲ್ಲಿ ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೂ ಮೂಡದಂತೆ ಮುನ್ನೆಚ್ಚರಿಕೆ ವಹಿಸಿ, ಪ್ರತಿಯೊಂದು ಕಾರ್ಯವನ್ನೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಿದ್ದ ಅವರ ಕಾರ್ಯಕ್ಷಮತೆ ಅನನ್ಯವಾದದ್ದು. ಅವರು ಕೇವಲ ಆದೇಶ ನೀಡುವ ಅಧಿಕಾರಿಯಾಗಿರಲಿಲ್ಲ; ಕೆಲಸವನ್ನು ತಾವೇ ಮುಂಚೂಣಿಯಲ್ಲಿ ನಿಂತು ಮಾಡಿ ತೋರಿಸುವ ಆದರ್ಶ ನಾಯಕಿಯಾಗಿದ್ದರು.
2024ರಲ್ಲಿ ನನಗೆ ಆಲಮೇಲ ತಾಲೂಕಿಗೆ ವರ್ಗಾವಣೆಯಾದಾಗ, ನನ್ನ ಜೀವನದ ಅತ್ಯಂತ ಭಾವುಕ ಕ್ಷಣವನ್ನು ನಾನು ಎದುರಿಸಿದೆ. ನಾನು ವರ್ಗಾವಣೆಯಾಗಿ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. "ಭೂತಿ... ನೀನು ಹೋಗಬೇಡ. ಬೇಕಾದರೆ ಈಗಲೂ ನಿನ್ನ ವರ್ಗಾವಣೆಯನ್ನು ರದ್ದು ಮಾಡಿಸುತ್ತೇನೆ..." ಎಂದು ಕಣ್ಣಾಲಿಗಳು ತುಂಬಿ ಬಂದಾಗ ಅವರು ಹೇಳಿದ ಮಾತುಗಳು ನನ್ನ ಮೇಲಿದ್ದ ಅವರ ಅಪಾರ ವಿಶ್ವಾಸಕ್ಕೆ ಸಾಕ್ಷಿ. ಅನಿವಾರ್ಯವಾಗಿ ನಾನು ಶಹಾಪುರವನ್ನು ಬಿಟ್ಟು ಬಂದರೂ, ನಮ್ಮ ನಡುವಿನ ಆತ್ಮೀಕ ಬಾಂಧವ್ಯ ಎಂದಿಗೂ ದೂರವಾಗಿಲ್ಲ.
ಇಂದು ಸುರಯ್ಯಾ ಮೇಡಂ ಅವರು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಆದರೆ ನೆನಪಿರಲಿ, ಕೇವಲ ಹುದ್ದೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ನಿವೃತ್ತಿ ಇರುತ್ತದೆಯೇ ಹೊರತು, ಅವರು ಸಮಾಜಕ್ಕೆ ನೀಡಿದ ಸೇವೆಗೆ, ಅವರ ಆದರ್ಶಗಳಿಗೆ ಮತ್ತು ಅವರು ಬೆಳಗಿದ ಜ್ಞಾನದ ದೀಪಕ್ಕೆ ಎಂದಿಗೂ ನಿವೃತ್ತಿಯಿರುವುದಿಲ್ಲ. ಆ ದೀಪ ಸಾವಿರಾರು ವಿದ್ಯಾರ್ಥಿಗಳ ಹಾಗೂ ನಮ್ಮಂತಹ ಶಿಕ್ಷಕರ ಬದುಕಿನಲ್ಲಿ ಸದಾ ಪ್ರಕಾಶಿಸುತ್ತಿರುತ್ತದೆ.
ವಿದ್ಯಾರ್ಥಿಗಳಿಗೆ ತಾಯಿಯಾಗಿ, ಸಹೋದ್ಯೋಗಿಗಳಿಗೆ ಸಹೋದರಿಯಾಗಿ, ಆಡಳಿತದಲ್ಲಿ ದಕ್ಷ ನಾಯಕಿಯಾಗಿ ಮೂಡಿಬಂದ ಶ್ರೀಮತಿ ಸುರಯ್ಯಾ ಬೇಗಂ ಹಾದಿಮನಿ ಮೇಡಂ ಅವರಿಗೆ ಭಗವಂತನು ಉತ್ತಮ ಆರೋಗ್ಯ, ಸುದೀರ್ಘ ಆಯುಷ್ಯ ಹಾಗೂ ಸುಖ-ಶಾಂತಿಯ ನಿವೃತ್ತ ಜೀವನವನ್ನು ಕರುಣಿಸಲಿ. ಸಾಹಿತ್ಯ, ಶಿಕ್ಷಣ ಹಾಗೂ ಸಮಾಜಸೇವೆಯ ಕ್ಷೇತ್ರದಲ್ಲಿ ಅವರ ಮಾರ್ಗದರ್ಶನ ಸಮಾಜಕ್ಕೆ ಇನ್ನೂ ದೀರ್ಘಕಾಲ ಸಿಗುವಂತಾಗಲಿ ಎಂದು ಈ ಅಭಿನಂದನ ಗ್ರಂಥದ ಮೂಲಕ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
*ಅವರಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು.*
✍️ – ಬಸವರಾಜ್ ಭೂತಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆಲಮೆಲ



Comments
Post a Comment