ಬಂಗಾರದ ಬನ್ನಿಯಲ್ಲಿ ಬೆಸೆದ ಸಂಬಂಧಗಳ ಸಡಗರ; ನೆನಪುಗಳಂಗಳದಲ್ಲಿ ಅರಳಿದ ವಿಜಯದಶಮಿ

ಬನ್ನಿ, ಸಂಬ್ರಮ...!

✍︎ ಬಸವರಾಜ ಭೂತಿ, ಶಿಕ್ಷಕರು, ಸಿಂದಗಿ

ಹಬ್ಬ ಅಂದರೆ ಬರೀ ಪೂಜೆ, ಪುನಸ್ಕಾರ, ಹೊಸ ಬಟ್ಟೆ, ಸಿಹಿ ಊಟ ಅಷ್ಟೇನಾ? ಖಂಡಿತಾ ಅಲ್ಲ. ಹಬ್ಬವೆಂದರೆ ಮನಸ್ಸುಗಳ ಮಿಲನ, ಸಂಬಂಧಗಳ ಸಂಭ್ರಮ, ನೆನಪುಗಳ ಜಾತ್ರೆ. ಮುನಿಸುಗಳ ಮಂಜು ಕರಗಿ, ಪ್ರೀತಿಯ ಸೂರ್ಯ ಮೂಡುವ ಹೊತ್ತು. ಅದರಲ್ಲೂ ಉತ್ತರ ಕರ್ನಾಟಕದ ಮಣ್ಣಿನಲ್ಲಿ ವಿಜಯದಶಮಿ ಅಂದರೆ ಅದೊಂದು ಹಬ್ಬವಷ್ಟೇ ಅಲ್ಲ; ಬನ್ನಿಯ ನೆಪದಲ್ಲಿ ಬಂಗಾರದಂಥ ಸಂಬಂಧಗಳನ್ನು ಅರಳಿಸುವ, ಮನಸ್ಸುಗಳನ್ನು ಬೆಸೆಯುವ, ಬದುಕಿನ ಜಂಜಾಟಕ್ಕೆ ಒಂದಿಷ್ಟು ಸಂತಸದ ಬಣ್ಣ ತುಂಬುವ ಅಪರೂಪದ ಸಂಭ್ರಮ.

ವಿಜಯದಶಮಿ ಬಂದಿತೆಂದರೆ ಸಾಕು, ಬಾಲ್ಯದ ನೆನಪುಗಳೆಲ್ಲ ಮನಸ್ಸಿನ ಬಾಗಿಲು ತಟ್ಟತೊಡಗುತ್ತವೆ. ನೆನಪುಗಳ ಬುತ್ತಿ ಬಿಚ್ಚಿದರೆ ಒಂದೊಂದೇ ಚಿತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಆ ಮಣ್ಣಿನ ಮನೆಯ ಸೊಗಡು, ಆಯಿ-ಮುತ್ಯಾರ ಮಮತೆ, ಅತ್ತೆಯ ಗತ್ತು, ನೀರಿಗಾಗಿ ಅಲೆದಾಟ, ಹಬ್ಬದ ಸಿದ್ಧತೆಯ ಗಡಿಬಿಡಿ, ಹೊಸ ಬಟ್ಟೆಯ ಸಂಭ್ರಮ, ಬನ್ನಿ ಮುಡಿಯುವ ಸಂಪ್ರದಾಯ—ಎಲ್ಲವೂ ಇಂದಿಗೂ ಹಸಿರಾಗಿಯೇ ಉಳಿದಿವೆ.

ನಾನು ಚಿಕ್ಕವನಿದ್ದಾಗ ತಂದೆ-ತಾಯಿಯರಿಗಿಂತ ಹೆಚ್ಚಾಗಿ ಆಯಿ-ಮುತ್ಯಾರ ಮಡಿಲಲ್ಲೇ ಬೆಳೆದವನು. ಆಗ ನಮ್ಮದೊಂದು ತುಂಬು ಕುಟುಂಬ. ಮನೆಯ ತುಂಬ ಮಕ್ಕಳ ಕಲರವ, ಹಿರಿಯರ ಮಾತು, ಅಡುಗೆಮನೆಯ ಘಮಲು, ಅಂಗಳದಲ್ಲಿ ಆಟವಾಡುವ ಮಕ್ಕಳ ಗಲಾಟೆ—ಹೀಗೆ ನಮ್ಮ ಮನೆ ಸದಾ ಜೀವಂತವಾಗಿರುತ್ತಿತ್ತು.

ಆಗಿನ ನವರಾತ್ರಿ ಹಬ್ಬದ ನೆನಪುಗಳೇ ಬೇರೆ. ಇವತ್ತಿನ ಮಕ್ಕಳಿಗೆ ಹಬ್ಬ ಅಂದರೆ ಹೊಸ ಬಟ್ಟೆ, ಸಿಹಿ ತಿನಿಸು, ಮೊಬೈಲಿನಲ್ಲಿ ಫೋಟೊ, ಸ್ನೇಹಿತರೊಂದಿಗೆ ಸಂಭ್ರಮ. ಆದರೆ ನಮ್ಮ ಬಾಲ್ಯದಲ್ಲಿ ಹಬ್ಬದ ಸಂಭ್ರಮ ಶುರುವಾಗುವುದೇ ಮನೆ ಸ್ವಚ್ಛಗೊಳಿಸುವ ಮಹಾ ಅಭಿಯಾನದಿಂದ!

ನವರಾತ್ರಿ ಹಬ್ಬಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ಮನೆಯಲ್ಲಿ ಸ್ವಚ್ಛತೆಯ ಸಮರ ಶುರುವಾಗುತ್ತಿತ್ತು. ಅಟ್ಟದ ಮೇಲಿದ್ದ ಹಳೆಯ ಸಾಮಾನುಗಳೆಲ್ಲ ಕೆಳಗಿಳಿಯುತ್ತಿದ್ದವು. ಮೂಲೆಮೂಲೆಯ ಧೂಳು ಕೊಡವಬೇಕಿತ್ತು. ಪಾತ್ರೆಗಳನ್ನು ತಿಕ್ಕಿ ತೊಳೆಯಬೇಕಿತ್ತು. ಗೋಡೆಗಳಿಗೆ ಸುಣ್ಣ ಬಳಿಯಬೇಕಿತ್ತು. ದೇವರ ಜಗುಲಿಯನ್ನು ಸಿಂಗರಿಸಬೇಕಿತ್ತು. ದೊಡ್ಡವರ ಪಾಲಿಗೆ ಅದು ಹಬ್ಬದ ತಯಾರಿ; ನಮ್ಮಂಥ ಮಕ್ಕಳ ಪಾಲಿಗೆ ಮಾತ್ರ ಅದು ಮುಗಿಯದ ಕೆಲಸಗಳ ಪಟ್ಟಿ!

ಅಷ್ಟಕ್ಕೂ ನಮ್ಮ ಸಂಕಟದ ಮೂಲವೇ ಬೇರೆ ಇತ್ತು. ಮನೆ ಸ್ವಚ್ಛ ಮಾಡಬೇಕೆಂದರೆ ಮೊದಲು ನೀರು ಬೇಕಲ್ಲ! ನಮ್ಮ ಸಿಂದಗಿ ಊರಿಗೆ ಆಗ ನೀರಿನ ಬರವೆಂಬುದು ಬೆನ್ನಿಗೆ ಬಿದ್ದ ನೆರಳಿನಂತಿತ್ತು. ಇವತ್ತು ನಲ್ಲಿಯನ್ನು ತಿರುಗಿಸಿದರೆ ನೀರು ಬರುತ್ತದೆ; ಅಂದು ಒಂದು ಕೊಡ ನೀರು ತರಬೇಕೆಂದರೆ ಮೈಲುಗಟ್ಟಲೆ ದೂರದ ಹಾದಿ ಸವೆಸಬೇಕಾಗುತ್ತಿತ್ತು.

ನಮ್ಮಪ್ಪನ ತಂಗಿ, ನಮ್ಮ ಸಂಗಮ ಅತ್ತೆಯೇ ಮನೆಯ ಯಜಮಾನಿ. ಆಕೆಯ ಮಾತೇ ಮನೆಯಲ್ಲಿ ಕೊನೆಯ ಮಾತು. ಆಕೆ ಹಾಕಿದ ಗೆರೆಯನ್ನು ದಾಟುವ ಧೈರ್ಯ ನಮ್ಮಂಥ ಮಕ್ಕಳಿಗಿರಲಿಲ್ಲ. ನಮ್ಮ ಪಾಲಿನ ಮುಖ್ಯ ಕೆಲಸವೆಂದರೆ ಮನೆಗೆ ನೀರು ತರುವುದು.

ನನ್ನ ಸಣ್ಣಪ್ಪಂದಿರಾದ ಮಲ್ಲಿಕಾರ್ಜುನ ಕಾಕಾ, ಯಮನಪ್ಪ ಕಾಕಾ ಮತ್ತು ನಾನು—ಬಹುತೇಕ ಸಮವಯಸ್ಕರು. ನಮ್ಮ ಮೂವರಿಗೂ ಹಬ್ಬದ ದಿನಗಳು ಹತ್ತಿರ ಬಂದರೆ ಸಂಭ್ರಮಕ್ಕಿಂತ ಸಂಕಟವೇ ಮೊದಲು ಶುರುವಾಗುತ್ತಿತ್ತು. ಯಾಕೆಂದರೆ ಹಬ್ಬಕ್ಕೆ ಬೇಕಾದ ನೀರಿನ ಬೇಡಿಕೆ ದುಪ್ಪಟ್ಟಾಗುತ್ತಿತ್ತು.

ನಸುಕಿನ ನಾಲ್ಕು ಗಂಟೆಗೇ ಅತ್ತೆ ನಮ್ಮನ್ನು ಎಬ್ಬಿಸಿಬಿಡುತ್ತಿದ್ದಳು. ಕಣ್ಣಲ್ಲಿ ಇನ್ನೂ ನಿದ್ದೆಯ ಮಂಪರು, ಮೈಯಲ್ಲಿ ಚಳಿಯ ನಡುಕ, ಮನಸ್ಸಿನಲ್ಲಿ ಹಾಸಿಗೆಯಿಂದ ಎದ್ದಿರಬಾರದಿತ್ತೆಂಬ ಆಸೆ! ಆದರೆ ಅತ್ತೆಯ ಆಜ್ಞೆಯ ಮುಂದೆ ಯಾವ ನೆಪವೂ ನಡೆಯುತ್ತಿರಲಿಲ್ಲ. ಹಗ್ಗ, ಕೊಡ ಹಿಡಿದುಕೊಂಡು ಬಾವಿಯ ದಾರಿ ಹಿಡಿಯಲೇಬೇಕಿತ್ತು.

ಪೂಜಾರಿಗಳ ಓಣಿಯ ಹತ್ತಿರವಿದ್ದ ಹೆಗ್ಗೆರೆಪ್ಪನ ದೇವಸ್ಥಾನದ ಬಳಿಯ ಸೇದುವ ಬಾವಿ ಆಗ ಅರ್ಧ ಊರಿನ ದಾಹ ತಣಿಸುತ್ತಿತ್ತು. ಹೀಗಾಗಿ ಅಲ್ಲಿ ಬೆಳಗಿನ ಜಾವವೇ ಜನಜಂಗುಳಿ. ಹೆಂಗಸರು, ಗಂಡಸರು, ಮಕ್ಕಳು—ಎಲ್ಲರೂ ಕೊಡ ಹಿಡಿದು ನೀರಿಗಾಗಿ ಸರದಿಯಲ್ಲಿ ನಿಂತಿರುತ್ತಿದ್ದರು. ನೀರು ಸೇದುವ ಸದ್ದು, ಕೊಡಗಳ ಗಲಾಟೆ, ಜನರ ಮಾತು, ಮಕ್ಕಳ ಅಳಲು—ಇವೆಲ್ಲ ಸೇರಿ ಆ ಬಾವಿಯ ಸುತ್ತ ಒಂದು ವಿಶಿಷ್ಟ ಲೋಕವೇ ಸೃಷ್ಟಿಯಾಗುತ್ತಿತ್ತು.

ಅದು ನಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರ. ಅಲ್ಲಿ ನೀರು ಸಿಗದಿದ್ದರೆ ಇನ್ನೂ ಮೂರ್ನಾಲ್ಕು ಕಿಲೋಮೀಟರ್ ಅಲೆದಾಡಬೇಕಾದ ಪರಿಸ್ಥಿತಿ. ನಮ್ಮಲ್ಲಿ ಒಬ್ಬರು ಬಾವಿಯಿಂದ ನೀರು ಸೇದಿ ಕೊಡುತ್ತಿದ್ದರೆ, ಮತ್ತೊಬ್ಬರು ಕೊಡ ತುಂಬಿಸಿ ನಮ್ಮ ಕಡೆಗೆ ತಳ್ಳುತ್ತಿದ್ದರು. ಆಮೇಲೆ ಅದನ್ನು ಹೊತ್ತುಕೊಂಡು ಮನೆಗೆ ತರುವುದು ನಮ್ಮ ಕೆಲಸ.

ಇವತ್ತಿನ ಮಕ್ಕಳಿಗೆ ನಮ್ಮ ಕಾಲದ ಬಟ್ಟೆಗಳ ಕಥೆ ಹೇಳಿದರೆ ಆಶ್ಚರ್ಯವಾಗಬಹುದು. ಆಗ ಮಕ್ಕಳಿಗೆ ಬಟ್ಟೆ ಹೊಲಿಸುವಾಗ ಬೆಳೆಯುತ್ತಾರೆಂದು ಒಂದೆರಡು ಅಳತೆ ಹೆಚ್ಚಾಗಿಯೇ ಹೊಲಿಸುತ್ತಿದ್ದರು. ಹೀಗಾಗಿ ಸೊಂಟದಲ್ಲಿ ನಿಲ್ಲದ ದೊಡ್ಡ ಹಾಫ್ ಚಡ್ಡಿ ನಮ್ಮ ಖಾಯಂ ವೇಷ! ಚಡ್ಡಿ ಜಾರದಿರಲೆಂದು ಉಡುದಾರಕ್ಕೆ ಒಂದು ಕಡ್ಡಿ ಸಿಕ್ಕಿಸಿ ಬಿಗಿದುಕೊಳ್ಳುತ್ತಿದ್ದೆವು. ಸರ್ಕಾರ ಶಾಲೆಗೆ ಕೊಟ್ಟ ಖಾಕಿ ಚಡ್ಡಿಯೂ ಇದಕ್ಕೆ ಹೊರತಾಗಿರಲಿಲ್ಲ.

ಒಂದು ಕೈಯಲ್ಲಿ ಚಡ್ಡಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಕೊಡದ ಗಜ್ಜಿಲು ಹಿಡಿದುಕೊಂಡು, ಅತ್ತ ಇತ್ತ ನೋಡುತ್ತಾ, ನೀರು ಚೆಲ್ಲದಂತೆ ಹೆಜ್ಜೆ ಹಾಕುತ್ತಾ ಮನೆ ತಲುಪುವುದೇ ಒಂದು ಸಾಹಸವಾಗಿತ್ತು. ಚಡ್ಡಿ ಜಾರುವ ಭಯ ಒಂದೆಡೆಯಾದರೆ, ಕೊಡದ ನೀರು ಚೆಲ್ಲುವ ಆತಂಕ ಇನ್ನೊಂದೆಡೆ!

ಒಂದು ದಿನಕ್ಕೆ ಮೂವತ್ತರಿಂದ ನಲವತ್ತು ದೊಡ್ಡ ಕೊಡ ನೀರು ಬೇಕಾಗುತ್ತಿತ್ತು. ಹಬ್ಬ-ಹುಣ್ಣಿಮೆ ಬಂದರಂತೂ ಒತ್ತಲೆ, ಹಂಡೆ, ತಪೇಲಿ, ಚಿಕ್ಕಪುಟ್ಟ ಪಾತ್ರೆಗಳೆಲ್ಲ ನೀರಿನಿಂದ ತುಂಬಿರಬೇಕಿತ್ತು.

ಇಂದು ಹಿಂದಿರುಗಿ ನೋಡಿದಾಗ ಆ ಕಷ್ಟಗಳೆಲ್ಲ ನೆನಪಿನ ಮೆರವಣಿಗೆಯಂತೆ ಕಾಣುತ್ತವೆ. ಆಗ ಮಾತ್ರ ಆ ಕೊಡದ ನೀರು ನಮಗೆ ಅಮೃತದಷ್ಟೇ ಅಮೂಲ್ಯವಾಗಿತ್ತು. ಪ್ರತಿಯೊಂದು ಹನಿಯ ಬೆಲೆಯನ್ನೂ ಬದುಕೇ ನಮಗೆ ಕಲಿಸಿತ್ತು.

ನೀರಿನ ಕೆಲಸ ಮುಗಿದ ಮೇಲೆ ಮನೆ ಸ್ವಚ್ಛಗೊಳಿಸುವ ಕೆಲಸ ಶುರು. ಮನೆಯ ಹೆಣ್ಣುಮಕ್ಕಳು ಹಳೆಯ ಸಾಮಾನುಗಳನ್ನೆಲ್ಲ ಹೊರತೆಗೆದು, ಅಡಕಲ ಗಡಿಗೆಗಳಿಂದ ಹಿಡಿದು ಬಳಕೆಗೆ ಬಾರದ ವಸ್ತುಗಳವರೆಗೆ ತಿಕ್ಕಿ ತೊಳೆದು ಜೋಡಿಸಿಡುತ್ತಿದ್ದರು. ಕಪಾಟಿನಲ್ಲಿದ್ದ ಕಂಚಿನ ಪಾತ್ರೆಗಳಿಗೆ ಹುಣಸೆಹಣ್ಣಿನ ರಾಡಿ ಹಾಕಿ ಉಜ್ಜಿದರೆ ಅವು ತಳತಳ ಹೊಳೆಯುತ್ತಿದ್ದವು. ಆ ಪಾತ್ರೆಗಳಲ್ಲಿ ಮುಖ ನೋಡಿಕೊಳ್ಳಬಹುದೆನಿಸುವಷ್ಟು ಕಳೆ ಬರುತ್ತಿತ್ತು.

ಸುಣ್ಣ, ಹುರಿಮಂಜ ತಂದು ನೆನೆಸಿಡುತ್ತಿದ್ದರು. ಹುರಿಮಂಜವೆಂದರೆ ಹಿಂದಿನ ಕಾಲದಲ್ಲಿ ಸುಣ್ಣದ ಗೋಡೆಗಳಿಗೆ ಹಚ್ಚುತ್ತಿದ್ದ ಕಂದು ಬಣ್ಣದ ಲೇಪನ. ರಾತ್ರಿ ಹೊತ್ತೂ ಗೋಡೆಗಳಿಗೆ ಸುಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು. ಕುಂಬಿಗಳ ಮೇಲೆ ಹುರಿಮಂಜದ ಬಣ್ಣ ಇಳಿಬಿಡುತ್ತಿತ್ತು. ಜಗುಲಿ, ಮಾಡ, ಕಪಾಟುಗಳ ಅಂಚುಗಳಿಗೆ ಬಣ್ಣ ಬಳಿಯಬೇಕಿತ್ತು.

ತೆಂಗಿನ ನಾರಿನಿಂದ ಕುಂಚ ಮಾಡಿಕೊಂಡು ಗೋಡೆಗಳ ಮೇಲೆ ಗೆರೆಯೆಳೆದು ಚಿತ್ರ ಬಿಡಿಸುತ್ತಿದ್ದೆವು. ನಮ್ಮ ಕೈಯಲ್ಲಿದ್ದದ್ದು ದುಬಾರಿ ಬಣ್ಣದ ಕುಂಚವಲ್ಲ; ಕಲ್ಪನೆಗೆ ರೆಕ್ಕೆ ಕೊಡುವ ಸರಳ ಸಾಧನ. ಆ ಗೆರೆಯಲ್ಲೂ ಒಂದು ಕಲೆ ಇತ್ತು, ಆ ಬಣ್ಣದಲ್ಲೂ ಒಂದು ಬದುಕಿನ ಸೊಗಡಿತ್ತು.

ಮನೆ ಸ್ವಚ್ಛವಾಗಿ, ಗೋಡೆಗಳು ಹೊಸ ಬಣ್ಣ ಪಡೆದು, ಪಾತ್ರೆಗಳು ಹೊಳೆಯತೊಡಗಿದಾಗ ನಮ್ಮ ಮನೆ ನಮಗೇ ಹೊಸದಾಗಿ ಕಾಣುತ್ತಿತ್ತು. ಹಬ್ಬದ ಹೊತ್ತಿಗೆ ಮನೆ ಬರೀ ವಾಸದ ಜಾಗವಾಗಿರಲಿಲ್ಲ; ದೇವಿಯನ್ನು ಬರಮಾಡಿಕೊಳ್ಳಲು ಸಿಂಗಾರಗೊಂಡ ವಧುವಿನಂತಾಗುತ್ತಿತ್ತು.

ಮನೆಯ ಕೆಲಸಗಳ ಮಧ್ಯೆ ಮತ್ತೊಂದು ಕೆಲಸವೂ ಇತ್ತು. ಕೌದಿ, ಕಂಚಡಿ, ಹಾಸಿಗೆ, ಹೊದಿಕೆಗಳ ಗಂಟು ಕಟ್ಟಿಕೊಂಡು ಲಂಡೇನ ಹಳ್ಳದ ದಾರಿ ಹಿಡಿಯಬೇಕಿತ್ತು. ನಮ್ಮೂರಿನ ಜಾಪಾನ ಬಾವಿಗೆ ಹೋಗಿ ಅವನ್ನೆಲ್ಲ ಒಗೆದು ತರಬೇಕಾಗುತ್ತಿತ್ತು.

ಬೆಳಗಿನ ಚಳಿ, ಕೈಯಲ್ಲಿ ಬಟ್ಟೆಗಳ ಗಂಟು, ಹಾದಿಯುದ್ದಕ್ಕೂ ಗೆಳೆಯರ ಮಾತು, ಹಳ್ಳದ ದಡದಲ್ಲಿ ಬಟ್ಟೆ ಒಗೆಯುವ ಗಡಿಬಿಡಿ—ಇವೆಲ್ಲವೂ ನಮ್ಮ ಬಾಲ್ಯದ ದಿನಚರಿಯ ಭಾಗವಾಗಿದ್ದವು. ಇವತ್ತು ಯೋಚಿಸಿದರೆ, ಆಗಿನ ಬದುಕು ಕಷ್ಟದ ಕಲ್ಲುಹಾದಿಯಾಗಿದ್ದರೂ ಅದರ ಪ್ರತಿಯೊಂದು ಹೆಜ್ಜೆಯಲ್ಲೂ ಗೆಳೆತನದ ಹೂವು ಅರಳುತ್ತಿತ್ತು.

ಹಬ್ಬಕ್ಕೆ ಬೇಕಾದ ಹೂವು, ಪತ್ರಿ, ಬನ್ನಿ ಎಲೆ, ಮಾವಿನ ತೋರಣ, ಬಾಳೆದಿಂಡು, ಕಬ್ಬು—ಎಲ್ಲವನ್ನೂ ಸಂಗ್ರಹಿಸುವ ಕೆಲಸವೂ ನಮ್ಮದೇ. ಹೊಲಕ್ಕೆ ಹೋಗಿ ಹುತ್ತಿನ ಮಣ್ಣು ತರುತ್ತಿದ್ದೆವು. ಚಂಡುಹೂವಿನ ಹಾರ ಮಾಡುತ್ತಿದ್ದೆವು. ದೇವರ ಜಗುಲಿಗೆ ಹಸಿರು ತೋರಣ ಕಟ್ಟಿ, ಹೂಗಳಿಂದ ಸಿಂಗರಿಸಿ, ಮೇಲೊಂದು ಹಂದರ ಹಾಕುತ್ತಿದ್ದೆವು.

ಹುತ್ತಿನ ಮಣ್ಣಿನಲ್ಲಿ ಐದು ಬಗೆಯ ಕಾಳುಗಳನ್ನು ಬೆರೆಸಿ ಸಸಿ ಹಾಕುತ್ತಿದ್ದರು. ಘಟಸ್ಥಾಪನೆ ಮಾಡಿ, ಅಂಬಾಭವಾನಿಯ ಹೆಸರಿನಲ್ಲಿ ದೀಪ ಹಚ್ಚುತ್ತಿದ್ದರು. ಹಬ್ಬ ಮುಗಿಯುವವರೆಗೂ ಆ ದೀಪ ಆರದಂತೆ ಕಾಳಜಿ ವಹಿಸುತ್ತಿದ್ದರು.

ದಿನ ಕಳೆದಂತೆ ಆ ಮಣ್ಣಿನ ಮಡಿಲಲ್ಲಿ ಹಸಿರು ಚಿಗುರುಗಳು ತಲೆ ಎತ್ತುತ್ತಿದ್ದವು. ನವರಾತ್ರಿಯ ಒಂಬತ್ತು ದಿನಗಳೂ ಅವುಗಳ ಬೆಳವಣಿಗೆಯನ್ನು ನೋಡುವುದೇ ಒಂದು ಪುಟ್ಟ ಸಂತೋಷ. ದಸರಾ ಮುಗಿಯುವ ಹೊತ್ತಿಗೆ ಸಸಿಗಳು ಗೆಣ್ಣೆತ್ತರಕ್ಕೆ ಬೆಳೆದು ನಿಂತಿರುತ್ತಿದ್ದವು. ಹಬ್ಬದ ನಂತರ ಮನೆಯ ಮಕ್ಕಳೆಲ್ಲ ಸೇರಿಕೊಂಡು ಆ ಸಸಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕೆರೆಗೋ, ಬಾವಿಗೋ ತೆಗೆದುಕೊಂಡು ಹೋಗಿ ಬಿಡುತ್ತಿದ್ದೆವು.

ಆ ಹಸಿರು ಚಿಗುರುಗಳು ನಮಗೆ ಪ್ರಕೃತಿಯ ಪಾಠ ಹೇಳುತ್ತಿದ್ದವು. ಮಣ್ಣಿನಲ್ಲಿ ಬಿತ್ತಿದ ಕಾಳು ಹೇಗೆ ಮೊಳಕೆಯೊಡೆದು ಬೆಳೆಯುತ್ತದೆಯೋ, ಹಾಗೆಯೇ ಪ್ರೀತಿ ಮತ್ತು ವಿಶ್ವಾಸವನ್ನು ಸಂಬಂಧಗಳಲ್ಲಿ ಬಿತ್ತಿದರೆ ಬದುಕು ಹಸಿರಾಗುತ್ತದೆ ಎಂಬುದನ್ನು ಆ ಸಂಪ್ರದಾಯ ಮೌನವಾಗಿ ಸಾರುತ್ತಿತ್ತು.

ಎಷ್ಟೇ ಕೆಲಸ ಮಾಡಿದರೂ ವಿಜಯದಶಮಿಯ ದಿನ ಮಾತ್ರ ನಮ್ಮ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಆ ದಿನ ಬೆಳಗಾಗುವುದನ್ನೇ ಕಾಯುತ್ತಿದ್ದೆವು. ಹೊಸ ಬಟ್ಟೆ ಧರಿಸುವ ಆಸೆ, ಹೋಳಿಗೆ-ಕಡುಬಿನ ಸಿಹಿ ಸವಿಯುವ ತವಕ, ಕಿಸೆಯಲ್ಲಿ ಬನ್ನಿ ತುಂಬಿಕೊಂಡು ಊರು ಸುತ್ತುವ ಉತ್ಸಾಹ—ಮನಸ್ಸೆಲ್ಲ ಹಬ್ಬದ ಗಾಳಿಯಲ್ಲಿ ತೇಲುತ್ತಿತ್ತು.

ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ಹೊಸ ಬಟ್ಟೆ ಉಟ್ಟು ಸಿದ್ಧರಾಗುತ್ತಿದ್ದೆವು. ಹೊಟ್ಟೆ ತುಂಬ ಹೋಳಿಗೆ, ಕಡುಬು ತಿಂದು, ಕಿಸೆಯಲ್ಲಿ ಬನ್ನಿ ಎಲೆಗಳನ್ನು ತುಂಬಿಕೊಂಡು ಹೊರಡಲು ತುದಿಗಾಲಲ್ಲಿ ನಿಂತಿರುತ್ತಿದ್ದೆವು.

ಆಗ ನಮ್ಮೂರಿನ ಹೆಣ್ಣುಮಕ್ಕಳು ಮಡಿ ಸೀರೆ ಉಟ್ಟು, ಇದ್ದಬದ್ದ ಬೋರಮಳ ಸರ, ಮುತ್ತಿನ ಸರ, ಬಳೆ, ಒಡವೆಗಳನ್ನು ಧರಿಸಿ, ತಲೆಗೆ ಹೂ ಮುಡಿದು ಬನ್ನಿ ಮುಡಿಯಲು ಬರುತ್ತಿದ್ದರು. ಅವರ ಸಿಂಗಾರ ನೋಡಿದರೆ ಸಾಕು, ದೇವಲೋಕದ ಅಪ್ಸರೆಯರೇ ಭೂಮಿಗೆ ಇಳಿದು ಬಂದರೇನೋ ಅನ್ನಿಸುತ್ತಿತ್ತು. ಅವರ ನಗು, ನಡಿಗೆ, ಮಾತು—ಎಲ್ಲದರಲ್ಲೂ ಹಬ್ಬದ ಕಳೆ ತುಂಬಿರುತ್ತಿತ್ತು.

ನಮಗೆ ಬನ್ನಿ ಮುಡಿಯುವ ಸಂಪ್ರದಾಯದಷ್ಟೇ ಆ ಸಿಂಗಾರದ ಸೊಬಗೂ ಹಬ್ಬದ ಆಕರ್ಷಣೆಯಾಗಿತ್ತು. ಬಾಲ್ಯದ ಕಣ್ಣುಗಳಿಗೆ ಎಲ್ಲವೂ ಅದ್ಭುತ; ಮನಸ್ಸಿಗೆ ಎಲ್ಲವೂ ಸಂಭ್ರಮ!

ಸಂಜೆ ಐದು ಗಂಟೆಯಾಗುತ್ತಿದ್ದಂತೆ ಮನೆಯ ಹಿರಿಯರು ಜಗುಲಿಯಲ್ಲೋ, ಕುರ್ಚಿಯಲ್ಲೋ ಕುಳಿತು ಬರುವ ಬಂಧುಗಳನ್ನು ನಗುನಗುತ್ತಾ ಸ್ವಾಗತಿಸುತ್ತಿದ್ದರು. ಅಳಿಯ ಬಂದರೆ ಮನೆಗೆ ಹಬ್ಬ, ಸೊಸೆ ಬಂದರೆ ಮನೆಗೆ ಸಡಗರ. ಹೊಸ ಸೀರೆ ಉಟ್ಟು ಬಂದ ಸೊಸೆಯನ್ನು ನೋಡಿ, “ನಮ್ಮ ಮನೆಯ ಸೊಸೆ ಎಷ್ಟು ಚಂದ ಕಾಣ್ತಾಳೆ!” ಎಂದು ಹಿರಿಯರು ಮೆಚ್ಚಿಕೊಳ್ಳುತ್ತಿದ್ದರು. ಮಕ್ಕಳು ಬೆಳೆದಿರುವುದನ್ನು ನೋಡಿ ಅವರ ಮುಖದಲ್ಲಿ ಹೆಮ್ಮೆಯ ನಗು ಅರಳುತ್ತಿತ್ತು.

ಮನೆಗೆ ಬಂದವರನ್ನು ದೇವರ ಜಗುಲಿಯ ಬಳಿ ಕರೆದೊಯ್ದು ಬನ್ನಿ ಮುಡಿಸುತ್ತಿದ್ದರು. ದೇವರಿಗೆ ಬನ್ನಿ ಸಮರ್ಪಿಸಿ, ಜಗುಲಿಯ ಮೇಲಿದ್ದ ಬನ್ನಿ-ಪತ್ರಿಗಳನ್ನು ಕಿಸೆಯಲ್ಲಿ ತುಂಬಿಕೊಂಡು, ಆಮೇಲೆ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆವು.

ಆ ಕ್ಷಣಗಳಲ್ಲಿ ಮನೆಯೊಳಗೆ ಹರಡುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲಾಗುತ್ತಿರಲಿಲ್ಲ.

“ಬನ್ನಿ ತಗೊಳ್ರಿ, ಬಂಗಾರದಂಗ ಇರೋಣ್ರಿ!”

ಬನ್ನಿ ಮುಡಿಸುವಾಗ ಹಿರಿಯರು ಹೇಳುತ್ತಿದ್ದ ಮಾತುಗಳೇ ಒಂದು ಕಾವ್ಯ!

“ಬನ್ನಿ ಕೊಟ್ಟು, ನಾವು ನೀವು ಬೆಳ್ಳಿ ಬಂಗಾರದಂಗ ಇರೋಣು ಬರ್ರಿ... ಕೈ ಹಿಡೀರಿ, ಉಡಿ ಒಡ್ಡರೀ... ಬಂಗಾರ, ಬಂಗಾರ ಅಂತಿದ್ರಲ್ಲ, ನನ್ನ ಮಗ ಸಾಕಷ್ಟು ಬಂಗಾರ ತಂದಾನ, ಬರ್ರಿ! ಬಂಗಾರದ ರೇಟು ಕೇಳಿದ್ರ ಬಂಗಾರದ ಅಂಗಡಿ ಮುಂದ ನಿಲ್ಲಾಕೂ ಆಗಲ್ಲ. ನಿಮ್ಮ ಮನಿತನಕ ನಾವು ಹೇಳ್ದ ಕೇಳ್ದ ಬಂಗಾರ ತಂದೀವಿ. ಎಷ್ಟು ಬೇಕು ಅಷ್ಟು ತಗೊಳ್ರಿ!”

ಈ ಮಾತುಗಳನ್ನು ಕೇಳಿದಾಗ ಮನೆಯೆಲ್ಲ ನಗುವಿನಿಂದ ತುಂಬಿಹೋಗುತ್ತಿತ್ತು. ಇಲ್ಲಿ ಬಂಗಾರವೆಂದರೆ ಚಿನ್ನದ ಗಟ್ಟಿಯಲ್ಲ; ಕೈಯಲ್ಲಿ ಹಿಡಿದ ಪುಟ್ಟ ಬನ್ನಿ ಎಲೆ. ಆದರೆ ಆ ಎಲೆಯ ಹಿಂದೆ ಇದ್ದ ಪ್ರೀತಿಗೆ ಬೆಲೆ ಕಟ್ಟಲು ಯಾವ ಚಿನ್ನದ ಅಂಗಡಿಯ ತಕ್ಕಡಿಯೂ ಸಾಲದು!

ಇವತ್ತಿನ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರಬಹುದು. ಆದರೆ ಅಂದು ಹಿರಿಯರು ಕಿಸೆಗೆ ತುಂಬುತ್ತಿದ್ದ ಬನ್ನಿಯ ಬೆಲೆ ಮಾತ್ರ ಯಾವ ಕಾಲಕ್ಕೂ ಇಳಿಯದು. ಅದು ಪ್ರೀತಿಯ ಬೆಲೆ, ವಿಶ್ವಾಸದ ಬೆಲೆ, ಸಂಬಂಧದ ಬೆಲೆ.

ಓಣಿಯ ಹಿರಿಯರಿಗೆಲ್ಲ ಬನ್ನಿ ಕೊಟ್ಟಾದ ಮೇಲೆ ನಾಲ್ಕೈದು ಗೆಳೆಯರು ಸೇರಿಕೊಂಡು ಊರು ಸುತ್ತಲು ಹೊರಡುತ್ತಿದ್ದೆವು. ಊರಿನ ವಿವಿಧ ಓಣಿಗಳಲ್ಲಿ ದೇವಿಯ ಮಂಟಪಗಳನ್ನು ಸಿಂಗರಿಸಿರುತ್ತಿದ್ದರು. ಹೂವಿನ ಅಲಂಕಾರ, ಬಣ್ಣಬಣ್ಣದ ದೀಪಗಳು, ದೇವಿಯ ಮೂರ್ತಿ, ಭಕ್ತಿಯ ವಾತಾವರಣ—ಪ್ರತಿಯೊಂದು ಮಂಟಪವೂ ಒಂದೊಂದು ಪುಟ್ಟ ಲೋಕದಂತೆ ಕಾಣುತ್ತಿತ್ತು.

ಅಲ್ಲಿ ದೇವಿಗೆ ಕೈಮುಗಿದು ಪ್ರಸಾದ ಸ್ವೀಕರಿಸುತ್ತಿದ್ದೆವು. ಊರಿನ ಹೆಣ್ಣುಮಕ್ಕಳು ಸಿಂಗಾರಗೊಂಡು ಬರುತ್ತಿದ್ದರೆ, ಅವರ ಹಿಂದೆ ಮುಂದೆ ಓಡಾಡುತ್ತಾ, ಚೌಕದಿಂದ ಚೌಕಕ್ಕೆ ಸುತ್ತಾಡುತ್ತಾ, ದೇವಿಯ ದರ್ಶನ ಪಡೆದು, ಪ್ರಸಾದ ಸವಿಯುತ್ತಾ ಹಬ್ಬವನ್ನು ಆಸ್ವಾದಿಸುತ್ತಿದ್ದೆವು.

ಆಗ ನಮಗೆ ಸಮಯದ ಅರಿವೇ ಇರುತ್ತಿರಲಿಲ್ಲ. ಕಾಲು ನೋವಾದರೂ ನಡೆಯುತ್ತಿದ್ದೆವು; ಹಸಿವಾದರೂ ಪ್ರಸಾದಕ್ಕಾಗಿ ಕಾಯುತ್ತಿದ್ದೆವು. ಯಾಕೆಂದರೆ ಅದು ಬರೀ ಊರು ಸುತ್ತುವ ದಿನವಲ್ಲ, ಬಾಲ್ಯದ ಸಂತೋಷಕ್ಕೆ ರೆಕ್ಕೆ ಮೂಡುವ ದಿನವಾಗಿತ್ತು.

ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿ ದಿನ ಬನ್ನಿ ವಿನಿಮಯ ಮಾಡುವ ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ. ಬನ್ನಿ ಎಲೆಗಳನ್ನು ಪರಸ್ಪರ ಕೊಟ್ಟು, “ನಾವು ನೀವು ಬಂಗಾರದಂಗ ಇರೋಣ” ಎಂದು ಶುಭ ಹಾರೈಸುತ್ತಾರೆ. ಈ ಸಂಪ್ರದಾಯದಲ್ಲಿ ಬಂಗಾರವೆಂಬುದು ಸಂಪತ್ತಿನ ಸಂಕೇತ ಮಾತ್ರವಲ್ಲ; ಸಮೃದ್ಧಿ, ಸೌಹಾರ್ದ, ಪ್ರೀತಿ ಮತ್ತು ಪರಸ್ಪರ ಗೌರವದ ಸಂಕೇತವೂ ಹೌದು.

ಬನ್ನಿ ಕೊಡುವಾಗ ಕೈಗಳು ಒಂದಾಗುತ್ತವೆ; ಕೈಗಳು ಒಂದಾದಾಗ ಮನಸ್ಸುಗಳು ಹತ್ತಿರವಾಗುತ್ತವೆ. ಮನಸ್ಸುಗಳು ಹತ್ತಿರವಾದಾಗ ವರ್ಷಗಟ್ಟಲೆ ಇದ್ದ ಮುನಿಸೂ ಕರಗಬಹುದು. ಮಾತು ನಿಂತಿದ್ದ ಸಂಬಂಧಕ್ಕೂ ಮತ್ತೆ ಮಾತಿನ ಮೊಳಕೆ ಬರಬಹುದು. ಹಳೆಯ ಸ್ನೇಹ ಹೊಸ ಚೈತನ್ಯ ಪಡೆಯಬಹುದು.

ಕೆಲವೊಮ್ಮೆ ಬದುಕಿನಲ್ಲಿ ದೊಡ್ಡ ದೊಡ್ಡ ಉಡುಗೊರೆಗಳಿಗಿಂತ ಇಂಥ ಸಣ್ಣ ಸಂಕೇತಗಳೇ ಹೆಚ್ಚು ಅರ್ಥಪೂರ್ಣವಾಗಿರುತ್ತವೆ. ಬೆಲೆಬಾಳುವ ವಸ್ತುವನ್ನು ಕೊಡುವುದಕ್ಕಿಂತ, ಪ್ರೀತಿಯಿಂದ ಕೈಹಿಡಿದು “ಚೆನ್ನಾಗಿರಿ” ಎನ್ನುವ ಮಾತು ದೊಡ್ಡದು. ಬನ್ನಿ ಎಲೆ ಆ ಮಾತಿನ ಹಸಿರು ರೂಪ.

ಆಗಿನ ದಿನಗಳಲ್ಲಿ ದೂರದ ಊರುಗಳಲ್ಲಿ ನೆಲೆಸಿದ್ದ ಸಹೋದರರು, ಸಂಬಂಧಿಕರು, ಸ್ನೇಹಿತರಿಗೆ ಪತ್ರ ಬರೆದು ಅದರೊಳಗೆ ಬನ್ನಿ ಎಲೆ ಇಟ್ಟು ವಿಜಯದಶಮಿಯ ಶುಭಾಶಯ ಕಳುಹಿಸುತ್ತಿದ್ದೆವು. ಪತ್ರ ಬರುವುದನ್ನೇ ಕಾಯುತ್ತಿದ್ದ ದಿನಗಳವು. ಅಂಚೆಗಾರನ ಸೈಕಲ್ ಗಂಟೆ ಕೇಳಿದರೆ ಸಾಕು, ಯಾರ ಪತ್ರ ಬಂದಿರಬಹುದು ಎಂಬ ಕುತೂಹಲ ಮೂಡುತ್ತಿತ್ತು.

ಪತ್ರದೊಳಗೆ ಒಂದೆರಡು ಬನ್ನಿ ಎಲೆಗಳಿದ್ದರೂ ಅದನ್ನು ತೆರೆದು ಓದುವಾಗ ಮನಸ್ಸಿನಲ್ಲಿ ಅರಳುತ್ತಿದ್ದ ಸಂತೋಷ ಅಪಾರ. ಆ ಎಲೆಗಳ ಮೂಲಕ ದೂರದ ಊರಿನಲ್ಲಿದ್ದವರ ಪ್ರೀತಿ ನಮ್ಮ ಮನೆಗೆ ಬಂದು ತಲುಪುತ್ತಿತ್ತು.

ಇಂದು ಕಾಲ ಬದಲಾಗಿದೆ. ಕೈಯಲ್ಲಿ ಸ್ಮಾರ್ಟ್‌ಫೋನ್ ಇದೆ. ಕ್ಷಣಾರ್ಧದಲ್ಲಿ ಫೋಟೊ ಕಳಿಸಬಹುದು, ವಿಡಿಯೊ ಕರೆ ಮಾಡಬಹುದು, ಶುಭಾಶಯದ ಸಂದೇಶ ಕಳುಹಿಸಬಹುದು. ತಂತ್ರಜ್ಞಾನ ನಮ್ಮನ್ನು ಹತ್ತಿರ ತಂದಿದೆ; ಅದು ನಿಜ. ಆದರೆ ಕೆಲವೊಮ್ಮೆ ಆ ವೇಗದ ನಡುವೆ ಸಂಬಂಧಗಳಿಗೆ ಬೇಕಾದ ಸಮಯವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ.

ಅಂದು ಪತ್ರ ಬರುವುದಕ್ಕೆ ದಿನಗಟ್ಟಲೆ ಕಾಯುತ್ತಿದ್ದೆವು; ಆದರೆ ಪತ್ರ ಬಂದಾಗ ಅದರೊಳಗೆ ಹೃದಯವೇ ಬಂದಂತೆ ಭಾಸವಾಗುತ್ತಿತ್ತು. ಇಂದು ಸಂದೇಶ ಕ್ಷಣಾರ್ಧದಲ್ಲಿ ಬರುತ್ತದೆ; ಆದರೆ ಅದನ್ನು ಓದಲು ಕೂಡ ನಮಗೆ ಬಿಡುವಿಲ್ಲದ ದಿನಗಳಾಗಿವೆ.

ಮೊಬೈಲಿನಲ್ಲಿ ಶುಭಾಶಯ ಕಳುಹಿಸುವುದರಲ್ಲಿ ತಪ್ಪಿಲ್ಲ. ಆದರೆ ಆ ಶುಭಾಶಯದ ಜೊತೆ ಒಂದಿಷ್ಟು ಆತ್ಮೀಯತೆ, ಒಂದು ಪ್ರೀತಿಯ ಮಾತು, ಒಂದು ನಿಜವಾದ ವಿಚಾರಣೆ, ಸಾಧ್ಯವಾದರೆ ಒಂದು ಮುಖಾಮುಖಿ ಭೇಟಿ—ಇವುಗಳೂ ಸೇರಲಿ. ತಂತ್ರಜ್ಞಾನ ಕೈಯಲ್ಲಿರಲಿ; ಸಂಬಂಧಗಳು ಹೃದಯದಲ್ಲಿರಲಿ.

ವಿಜಯದಶಮಿ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಒಳ್ಳೆಯತನದ ವಿಜಯವನ್ನು ಸಾರುವ ಪರ್ವ. ದುಷ್ಟಶಕ್ತಿಯ ಮೇಲೆ ಶಕ್ತಿಯ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ನಿರಾಶೆಯ ಮೇಲೆ ಆಶೆಯ ವಿಜಯ—ಹೀಗೆ ಈ ಹಬ್ಬಕ್ಕೆ ಹಲವು ಅರ್ಥಗಳಿವೆ.

ನವರಾತ್ರಿಯಲ್ಲಿ ಶಕ್ತಿಸ್ವರೂಪಿಣಿ ದೇವಿಯನ್ನು ಆರಾಧಿಸಿ, ವಿಜಯದಶಮಿಯಂದು ಬನ್ನಿ ವಿನಿಮಯ ಮಾಡುವ ಮೂಲಕ ನಾವು ಬದುಕಿನಲ್ಲೂ ಒಳ್ಳೆಯತನವನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ.

ಜೀವನವೆಂದರೆ ಸದಾ ಹೂವಿನ ಹಾಸಿಗೆಯಲ್ಲ. ಬದುಕಿನ ಹಾದಿಯಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ, ಮುನಿಸುಗಳು ಮೂಡುತ್ತವೆ, ಅಹಂಕಾರ ಗೋಡೆಯಾಗುತ್ತದೆ. ಕೆಲವೊಮ್ಮೆ ಒಂದು ಸಣ್ಣ ಮಾತು ವರ್ಷಗಳ ಸಂಬಂಧವನ್ನೇ ದೂರ ಮಾಡುತ್ತದೆ. ಆದರೆ ಅಂಥ ಗೋಡೆಗಳನ್ನು ಕೆಡವಲು ದೊಡ್ಡ ಆಯುಧಗಳೇನೂ ಬೇಕಿಲ್ಲ. ಒಂದು ನಗು, ಒಂದು ಕ್ಷಮೆಯ ಮಾತು, ಒಂದು ಪ್ರೀತಿಯ ಅಪ್ಪುಗೆ, ಒಂದು ಬನ್ನಿ ಎಲೆ ಸಾಕಾಗಬಹುದು.

ಹೀಗಾಗಿ ಈ ವಿಜಯದಶಮಿಯಂದು ಬನ್ನಿ ಕೊಡುವಾಗ ಬರೀ “ನೀವು ಬಂಗಾರದಂಗ ಇರ್ರಿ” ಎನ್ನುವುದಷ್ಟೇ ಅಲ್ಲ; “ನಮ್ಮ ಸಂಬಂಧವೂ ಬಂಗಾರದಂಗ ಇರಲಿ” ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡೋಣ. ಬಹಳ ದಿನಗಳಿಂದ ಮಾತನಾಡದವರಿದ್ದರೆ ಮಾತನಾಡೋಣ. ನೋವು ಕೊಟ್ಟಿದ್ದರೆ ಕ್ಷಮೆ ಕೇಳೋಣ. ನೋವು ಅನುಭವಿಸಿದ್ದರೆ ಕ್ಷಮಿಸುವ ಮನಸ್ಸು ಬೆಳೆಸಿಕೊಳ್ಳೋಣ. ಹಿರಿಯರ ಆಶೀರ್ವಾದ ಪಡೆಯೋಣ; ಕಿರಿಯರಿಗೆ ಪ್ರೀತಿ ಹಂಚೋಣ.

ಹಬ್ಬದ ನಿಜವಾದ ಸಾರ್ಥಕತೆ ದೇವರ ಜಗುಲಿಯಲ್ಲಿ ಹಚ್ಚಿದ ದೀಪದ ಬೆಳಕು ಮನೆಯೊಳಗೆ ಹರಡುವುದರಲ್ಲಿ ಮಾತ್ರವಿಲ್ಲ; ಆ ಬೆಳಕು ನಮ್ಮ ಮನಸ್ಸಿನೊಳಗೂ, ನಮ್ಮ ನಡವಳಿಕೆಯಲ್ಲೂ, ನಮ್ಮ ಸಂಬಂಧಗಳಲ್ಲೂ ಹರಡುವುದರಲ್ಲಿದೆ.

ಇಂದು ಆ ಬಾಲ್ಯದ ದಿನಗಳನ್ನು ನೆನೆದಾಗ ಮನಸ್ಸು ಮೌನವಾಗಿ ನಗುತ್ತದೆ. ನೀರಿಗಾಗಿ ನಸುಕಿನಲ್ಲೇ ಎದ್ದು ಅಲೆದಾಡಿದ ಕಷ್ಟ, ಸೊಂಟದಲ್ಲಿ ನಿಲ್ಲದ ಚಡ್ಡಿಯನ್ನು ಹಿಡಿದು ಕೊಡ ಹೊತ್ತ ನೆನಪು, ಗೋಡೆಗಳಿಗೆ ಸುಣ್ಣ ಬಳಿದ ಸಂಭ್ರಮ, ಕೌದಿ-ಕಂಚಡಿ ಒಗೆದ ದಿನಗಳು—ಅಂದು ಕಷ್ಟವೆನಿಸಿದ್ದ ಅವೆಲ್ಲ ಇಂದು ಬದುಕಿನ ಅತ್ಯಮೂಲ್ಯ ಸಂಪತ್ತಾಗಿ ಕಾಣುತ್ತವೆ.

ಆಯಿ-ಮುತ್ಯಾರ ಮಮತೆ, ಸಂಗಮ ಅತ್ತೆಯ ಗತ್ತು, ಸಣ್ಣಪ್ಪಂದಿರ ಒಡನಾಟ, ಮನೆಯ ತುಂಬ ಮಕ್ಕಳ ಗಲಾಟೆ, ಹಬ್ಬಕ್ಕೆ ಬಂದ ಬಂಧುಗಳ ನಗು—ಇವೆಲ್ಲವೂ ಕಾಲದ ಪುಟಗಳಲ್ಲಿ ಮರೆಯಾಗದೆ ಮನಸ್ಸಿನ ಪುಟಗಳಲ್ಲಿ ಅಚ್ಚೊತ್ತಿಕೊಂಡಿವೆ.

ಕಾಲ ಬದಲಾಗಿದೆ. ಮನೆಗಳು ಬದಲಾಗಿವೆ. ಬದುಕಿನ ಕ್ರಮ ಬದಲಾಗಿದೆ. ಹಬ್ಬ ಆಚರಿಸುವ ವಿಧಾನವೂ ಬದಲಾಗಿದೆ. ಆದರೆ ಬನ್ನಿ ಎಲೆಯೊಳಗೆ ಅಡಗಿರುವ ಪ್ರೀತಿಯ ಅರ್ಥ ಬದಲಾಗಬಾರದು. ಸಂಬಂಧಗಳನ್ನು ಬೆಸೆಯುವ ಆ ಸಂಪ್ರದಾಯದ ಆತ್ಮ ಕಳೆದುಹೋಗಬಾರದು.

ಹಿಂದೆ ಒಂದು ಕೊಡ ನೀರಿಗಾಗಿ ಮೈಲುಗಟ್ಟಲೆ ನಡೆಯುತ್ತಿದ್ದೆವು; ಇಂದು ನೀರು ಮನೆಬಾಗಿಲಿಗೇ ಬರುತ್ತಿದೆ. ಹಿಂದೆ ಪತ್ರದೊಳಗೆ ಬನ್ನಿ ಇಟ್ಟು ಕಳುಹಿಸುತ್ತಿದ್ದೆವು; ಇಂದು ಕ್ಷಣಾರ್ಧದಲ್ಲಿ ಶುಭಾಶಯ ತಲುಪುತ್ತದೆ. ಸೌಲಭ್ಯಗಳು ಹೆಚ್ಚಾಗಿವೆ. ಆದರೆ ಆ ಸೌಲಭ್ಯಗಳ ನಡುವೆಯೂ ಮನುಷ್ಯ ಮನುಷ್ಯನಿಗೆ ಹತ್ತಿರವಾಗುವ ಮನಸ್ಸು ಮಾತ್ರ ಉಳಿಯಬೇಕು.

ಯಾಕೆಂದರೆ ಬದುಕಿನ ಕೊನೆಯಲ್ಲಿ ನಾವು ನೆನಪಿಸಿಕೊಳ್ಳುವುದು ಎಷ್ಟು ಬಂಗಾರ ಸಂಪಾದಿಸಿದೆವು ಎಂಬುದನ್ನಲ್ಲ; ಯಾರ ಪ್ರೀತಿಯನ್ನು ಸಂಪಾದಿಸಿದೆವು, ಯಾರ ಕಣ್ಣಲ್ಲಿ ಸಂತೋಷ ಮೂಡಿಸಿದೆವು, ಯಾರ ಕಷ್ಟಕ್ಕೆ ಹೆಗಲು ಕೊಟ್ಟೆವು ಎಂಬುದನ್ನೇ.

ಹಾಗಾಗಿ ಬನ್ನಿ, ಈ ವಿಜಯದಶಮಿಯನ್ನು ಬರೀ ಹಬ್ಬವಾಗಿ ಆಚರಿಸದೆ, ಸಂಬಂಧಗಳನ್ನು ನವೀಕರಿಸುವ ದಿನವನ್ನಾಗಿ ಮಾಡೋಣ. ಮನದೊಳಗಿನ ದ್ವೇಷಕ್ಕೆ ವಿದಾಯ ಹೇಳೋಣ. ಪ್ರೀತಿಗೆ ಸ್ವಾಗತ ಕೋರುಣ. ಮುನಿಸಿನ ಬಾಗಿಲು ಮುಚ್ಚಿ, ಆತ್ಮೀಯತೆಯ ಕಿಟಕಿ ತೆರೆಯೋಣ.

ಬನ್ನಿ ಕೊಟ್ಟು ಬಂಗಾರ ಪಡೆಯೋಣ; ಪ್ರೀತಿ ಕೊಟ್ಟು ಪ್ರೀತಿ ಗಳಿಸೋಣ.

ನಮ್ಮ ಬದುಕು ಬನ್ನಿಯಂತೆ ಹಸಿರಾಗಲಿ, ಸಂಬಂಧಗಳು ಬಂಗಾರದಂತೆ ಹೊಳೆಯಲಿ, ಮನಸ್ಸುಗಳು ಹಬ್ಬದ ದೀಪದಂತೆ ಬೆಳಗಲಿ.

ಬನ್ನಿ, ಸಂಭ್ರಮಿಸೋಣ...!

ಬನ್ನಿ, ಸಂಬಂಧಗಳನ್ನು ಬೆಸೆಯೋಣ...!

ಬನ್ನಿ, ಮನುಷ್ಯತ್ವದ ಬಂಗಾರವನ್ನು ಹಂಚೋಣ...

ಹವ್ಯಾಸಿ ಬರಹಗಾರರು : 

ಬಸವರಾಜ ಭೂತಿ, ಶಿಕ್ಷಕರು, ಸಿಂದಗಿ

 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ವಿಭೂತಿಹಳ್ಳಿ ಅಲಮೇಲ

ಮೊಬೈಲ್: 9900804567


https://www.instagram.com/stories/basavarajabhooti/4012593487752582242?utm_source=ig_story_item_share&dlrf=djFoaDR3NmFoYmdo






Comments

Post a Comment

Popular posts from this blog

ಸರ್ವರಿಗೂ ಎಳ್ಳು ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.

ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ವೈಭವವಾಗಿ ನೆರವೇರಿತು.

ನಿಮ್ಮ ನಿವೃತ್ತಿ ಜೀವನ ಶುಭಕರವಾಗಲಿ ಮೇಡಂ